ಕರಾವಳಿಯಲ್ಲಿ ವಿಪರೀತ ಉಷ್ಣಾಂಶ – ಸೆಕೆಯ ಕಿರಿಕಿರಿ

ಮಂಗಳೂರು: ಕರಾವಳಿ ಭಾಗದಲ್ಲಿ ಕೆಲ ದಿನಗಳಿಂದ ಗರಿಷ್ಠ ಉಷ್ಣಾಂಶ ಏರಿಕೆಯಾಗಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಪರಿಣಾಮ ದಿನವಿಡೀ ಸೆಕೆಯ ಕಿರಿ ಕಿರಿ ಅನುಭವಿಸುವಂತಾಗಿದೆ.

ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ 35 ಡಿಗ್ರಿ ಸೆಲ್ಸಿಯಸ್‌ ಇರುತ್ತಿದ್ದ ತಾಪಮಾನ ಸದ್ಯ 37 ಡಿ.ಸೆ. ಗಡಿ ದಾಟುತ್ತಿದೆ. ಕರಾವಳಿಯಲ್ಲಿ ಬೆಳಗ್ಗಿನ ಜಾವ ಮಂಜು, ತುಸು ಚಳಿ ಇರು ತ್ತಿದ್ದು, ಸಮಯ ಕಳೆದಂತೆ ಸೆಕೆಯ ಅನುಭವ ಆಗುತ್ತಿದೆ. ಮಧ್ಯಾಹ್ನ ವೇಳೆ ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗಿ ರಾತ್ರಿಯವರೆಗೆ ಮುಂದುವರೆಯುತ್ತಿದೆ.

ಕರಾವಳಿ ಭಾಗದಲ್ಲಿ ನವೆಂಬರ್‌ನಲ್ಲಿ ಆರಂಭವಾಗಬೇಕಿದ್ದ ಚಳಿ ಈ ಬಾರಿ ತಡವಾಗಿ ಆರಂಭವಾಗಿತ್ತು. ಅದರಲ್ಲೂ ಕೆಲ ದಿನಗಳವರೆಗೆ ಮಾತ್ರ ಚಳಿ ಇತ್ತು. ಸದ್ಯ ದೇಶದೆಲ್ಲೆಡೆ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡಿದೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ, ಕರಾವಳಿಯ ಸದ್ಯದ ವಾತಾವರಣ ಪೂರ್ವ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಮಾರ್ಚ್‌ ತಿಂಗಳು ಮೂರನೇ ಅಥವಾ ನಾಲ್ಕನೇ ವಾರದಿಂದ ಪೂರ್ವ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದೆ.ಉಷ್ಣಾಂಶ ಏರಿಕೆಯ ಪರಿಣಾಮ ವಾತಾವರಣದಲ್ಲಿ ಒತ್ತಡ ಕಡಿಮೆಯಾಗಿ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಲಿದೆ. ಇದರಿಂದಾಗಿ ಮಳೆ ಸುರಿಯುವ ಸಾಧ್ಯತೆ ಹೆಚ್ಚು. ಹವಾಮಾನ ಇಲಾಖೆಯ ತಜ್ಞರ ಪ್ರಕಾರ ಇನ್ನೂ, ಕೆಲ ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರಿಯಲಿದೆ.

ಬಿಸಿಲಿನ ಬೇಗೆ ತಣಿಸಲು ಕೆಲವರು ತಂಪು ಪಾನೀಯದ ಮೊರೆ ಹೋಗುತ್ತಿದ್ದರೆ ಇನ್ನೂ ಕೆಲವರು ಬೀಚ್‌ನ ಕಡೆಗೆ ಬರುತ್ತಿದ್ದಾರೆ. ತಾಪಮಾನ ಹೆಚ್ಚಿದ ಕಾರಣದಿಂದಾಗಿ ಕೆಲವು ರೋಗಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲಿಯೂ ಹೆಚ್ಚಿದ ತಾಪಮಾನದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯ ಸಾಧ್ಯತೆ ಹೆಚ್ಚಿದೆ.
ತುರಿಕೆ, ಹುಣ್ಣು, ಗಂಟಲು ನೋವು, ತಲೆನೋವು, ಶೀತ-ಜ್ವರ ಸೇರಿದಂತೆ ಅನೇಕ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮಂಗಳೂರಿನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 35.4 ಡಿ.ಸೆಲ್ಸಿಯಸ್‌ ದಾಖಲಾಗಿತ್ತು. ಇದು ವಾಡಿಕೆಯ ತಾಪಮಾನಕ್ಕಿಂದ 2.8 ಡಿ.ಸೆ. ಹೆಚ್ಚು. ಕನಿಷ್ಠ ತಾಪಮಾನ 25.1 ಡಿ.ಸೆ. ದಾಖಲಾಗಿತ್ತು. ಉಡುಪಿಯಲ್ಲಿ ಮಂಗಳವಾರ 30 ಡಿ.ಸೆ. ಗರಿಷ್ಠ ತಾಪಮಾನ ಮತ್ತು 23 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.

Latest Indian news

Popular Stories