ನಾನು ಆರೋಗ್ಯವಾಗಿದ್ದೇನೆ, ಅಭಿಮಾನ ಆವೇಶವಾಗುವುದು ಬೇಡ, ನಾನು ಕೇಳದೆ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ’: ಹಂಸಲೇಖ

ಬೆಂಗಳೂರು: ಪೇಜಾವರ ಮಠದ(Pejawar mutt swamiji) ಹಿರಿಯ ಯತಿಗಳು ದಲಿತರ ಮನೆಗೆ ಹೋಗುತ್ತಿದ್ದ ವಿಚಾರದ ಬಗ್ಗೆ ಮೈಸೂರಿನಲ್ಲಿ ಸಮಾರಂಭವೊಂದರಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಮಾತನಾಡಿದ್ದು ತೀವ್ರ ವಿವಾದ ಮತ್ತು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಹಂಸಲೇಖ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಹಂಸಲೇಖ(Hamsalekha) ಅವರು ಪೇಜಾವರ ಮಠಕ್ಕೆ ಹೋಗಿ ಕ್ಷಮೆ ಕೇಳಬೇಕೆಂದು ಸಹ ಸಮಾಜದ ಹಲವು ವರ್ಗದ ಜನರು ಒತ್ತಾಯಿಸಿದ್ದರು. ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಸಂಗೀತ ನಿರ್ದೇಶಕ ಹಂಸಲೇಖ ಸೋಷಿಯಲ್ ಮೀಡಿಯಾ ಮೂಲಕ ಕ್ಷಮೆ ಕೇಳಿದ್ದರು. ನಂತರ ಸಾರ್ವಜನಿಕವಾಗಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಮಧ್ಯೆ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿದವು.

ಇದಕ್ಕೆ ಸ್ವತಃ ಹಂಸಲೇಖ ಅವರೇ ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾನು ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ರಾಜ್ಯದ ಹಲವು ಭಾಗಗಳಿಂದ ಕರೆಗಳು ಬರುತ್ತಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ, ನನಗೆ ಏನೂ ಸಮಸ್ಯೆಯಾಗಿಲ್ಲ, ಆರೋಗ್ಯವಾಗಿದ್ದೇನೆ, ನಿಮ್ಮ ಪ್ರೀತಿ ಗಳಿಸಲು ನಾನು ಸಾಕಷ್ಟು ಶ್ರಮ ಹಾಕಿದ್ದು, ಕಷ್ಟ ಸಹ ಪಟ್ಟಿದ್ದೇನೆ, ಅದರ ಸುಖವನ್ನು ಇಂದು ಕಾಣುತ್ತಿದ್ದೇನೆ,

ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ. ನನ್ನ ಮಾತು ವಿವಾದವಾದ ನಂತರ ಲಕ್ಷಾಂತರ ಮಂದಿ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ಆವೇಶವಾಗುವುದು ಬೇಡ, ಆವೇಶ ಅವಘಡಗಳಿಗೆ ಕಾರಣವಾಗುವುದು ಸಹ ಬೇಡ, ಅಭಿಮಾನ ಹಾಡಿನಂತಿರಲಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

Latest Indian news

Popular Stories