ಪ್ರತಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮಂಡನೆ, ನಾಳೆ ಚರ್ಚೆಗೆ ಅವಕಾಶ

ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ರಾಜ್ಯ ಸರ್ಕಾರ ಮಂಗಳವಾರ ತರಾತುರಿಯಲ್ಲಿ ವಿಧಾನಸಭೆಯಲ್ಲಿ ಮಂಡಿಸಿದೆ.

ಇಂದು ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ತಮಗೆ ಮತಾಂತರ ನಿಷೇಧ ವಿಧೇಯಕದ ಪ್ರತಿ ಕೊಟ್ಟಿಲ್ಲ ಮತ್ತು ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇಂಥ ವಿಧೇಯಕಗಳನ್ನು ಕದ್ದುಮುಚ್ಚಿ ಏಕೆ ಮಂಡಿಸುತ್ತೀರಿ? ಸರ್ಕಾರ ಕಳ್ಳತನದಿಂದ ವಿಧೇಯಕ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದು ತಾರತಮ್ಯ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ. ಅಧಿವೇಶನದ ದ್ವಿತೀಯಾರ್ಧಕ್ಕೆ ವಿಧಾನಸಭೆಯ ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವ ಮುನ್ನವೇ ವಿಧೇಯಕ ಮಂಡನೆಗೆ ಸ್ಪೀಕರ್ ಅವಕಾಶ ನೀಡಿರುವುದು ಸರಿಯಲ್ಲ. ಎಲ್ಲ ಸದಸ್ಯರು ಸಭಾಂಗಣ ಪ್ರವೇಶಿಸುವವರೆಗೆ ಸ್ಪೀಕರ್ ಏಕೆ ಕಾಯಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ಈಗ ವಿಧೇಯಕ ಮಂಡನೆಯಾಗಿದೆ ಅಷ್ಟೇ. ಈ ಕುರಿತು ಬುಧವಾರ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಇನ್ನೂ ಡಿಕೆ ಶಿವಕುಮಾರ್ ಅವರು ಜನವಿರೋಧಿ ಮಸೂದೆಯನ್ನು ಕಟುವಾಗಿ ವಿರೋಧಿಸುವ ಭರದಲ್ಲಿ ಮಸೂದೆಯ ಪ್ರತಿಗಳನ್ನು ಹರಿದು ಪೀಠದ ಮೇಲೆ ಎಸೆದರು. ಸರ್ಕಾರವು ಏಕೆ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಹಲವು ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದರು.

Latest Indian news

Popular Stories