ಬಿಜೆಪಿಯ ವೈಫಲ್ಯವನ್ನು ಜನ ಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದರೆ ವೈಯಕ್ತಿಕವಾಗಿ ಟೀಕಿಸುವುದು ಆ ಪಕ್ಷದ ಚಾಳಿ – ರಮೇಶ್ ಕಾಂಚನ್

ಕಾಂಗ್ರೆಸ್ ಪಕ್ಷದ ನಾಯಕರಾದ ಮಿಥುನ್ ರೈ ಅವರು ಬಿಜೆಪಿ ಶಾಸಕರ, ಸಂಸದರ ವೈಫಲ್ಯವನ್ನು ಜನರಿಗೆ ಎತ್ತಿ ತೋರಿಸಿದಾಗ ಬಿಜೆಪಿಗರಿಗೆ ಅತೀವ ನೋವಾಗಿದೆ.

ವೈಯಕ್ತಿಕ ಟೀಕೆಗೆ ಇಳಿದಿದ್ದಾರೆ. ಜನ ಪ್ರತಿನಿಧಿಗಳು ಜನರಿಂದ ಆಯ್ಕೆಗೊಂಡವರು. ಜನರಿಗೆ ಸಮಸ್ಯೆಯಾದಾಗ ಅವರಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅವರು ವಿಫಲರಾದಾಗ ಅವರನ್ನು ಎಚ್ಚರಿಸುವುದು ವಿರೋಧ ಪಕ್ಷದ ಕರ್ತವ್ಯವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತಿಳಿಸಿದರು.

ಬಿಜೆಪಿಯ ವೈಫಲ್ಯವನ್ನು ಜನ ಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದರೆ ವೈಯಕ್ತಿಕವಾಗಿ ಟೀಕೆ ಮಾಡುವುದು ಆ ಪಕ್ಷದ ಮುಖಂಡರ ಚಾಳಿ. ಜನರ ಸಮಸ್ಯೆಯ ಕಡೆಗೆ ಇವರ ಗಮನ ಶೂನ್ಯ. ಶಾಸಕ ರಘುಪತಿ ಭಟ್ ಆರು ತಿಂಗಳಿನಿಂದ ರಸ್ತೆ ದುರಸ್ತಿ ನಡೆಸುವುದಾಗಿ ಹೇಳುತ್ತಿದ್ದಾರೆ. ಆದರೆ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಇದರಿಂದ ಜನರ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ರಸ್ತೆ ಅಪಘಾತದಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದಾರೆ.

ಜನ ಪ್ರತಿನಿಧಿಗಳು ಆರು ತಿಂಗಳಿಗೊಮ್ಮೆ ಗೆದ್ದ ಕ್ಷೇತ್ರಕ್ಕೆ ಬಂದು ಮುಖ ತೋರಿಸಿ ಹೋಗುವುದಲ್ಲ ಬದಲಾಗಿ ಜನರಿಗೆ ಸಮಸ್ಯೆ ಎದುರಾದಾಗ ಅವರೊಂದಿಗಿದ್ದು ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಆಡಳಿತ ಪಕ್ಷದ ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದಾಗ ಅದರ ವಿರುದ್ಧ ಪ್ರತಿಭಟಿಸುವ, ನಾಯಕರನ್ನು ಅಲಸ್ಯದಿಂದ ಎಬ್ಬಿಸುವ ಕಾರ್ಯ ಮಾಡುವ ಹಕ್ಕು ಕಾಂಗ್ರೆಸ್ ಪಕ್ಷದ ಮುಖಂಡ ಮಿಥುನ್ ರೈ ಅವರಿಗಿದೆ. ಮಿಥುನ್ ರೈ ಅವರ ಟೀಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಜನರ ನೋವಿಗೆ ಸ್ಪಂದಿಸಿ ಸರಕಾರ ಹದೆಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸಲಿ ಎಂದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಸಂಪೂರ್ಣ ಅಧೋಗತಿಯಾಗಿದ್ದು ಇದರ ಬಗ್ಗೆ ಸಂಸದರು ಗಮನಹರಿಸಲಿ. ಮೀನುಗಾರರು, ಕೃಷಿಕರು, ಜನ ಸಾಮಾನ್ಯರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರೂ ಸಂಸದೆ ಶೋಭಾ ಕರಂದ್ಲಾಜೆ ಅವರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಅವರು ಕೇಂದ್ರ ಸಚಿವೆಯಾಗಿದ್ದರೂ ಉಡುಪಿ-ಚಿಕ್ಕಮಂಗಳೂರು ಕ್ಷೇತ್ರದ ಸಂಸದೆ ಎಂಬುವುದನ್ನು ಮರೆಯಬಾರದು. ಎಲ್ಲಿಯವರೆಗೆ ಆಡಳಿತರೂಢ ಬಿಜೆಪಿ ತನ್ನ ನಿರ್ಲಕ್ಷ್ಯ ಧೋರಣೆ ಮುಂದುವರಿಸುತ್ತದೆ ಅಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಬಿಜೆಪಿಯ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸಲಿದೆ ಎಂದು ರಮೇಶ್ ಕಾಂಚನ್ ಪತ್ರಿಕಾ ‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest Indian news

Popular Stories