ರಾಜ್ಯಕ್ಕೆ ಕಾಲಿಟ್ಟ ಹೆಮ್ಮಾರಿ ‘ಓಮಿಕ್ರಾನ್’: ಹೊಸ ಮಾರ್ಗಸೂಚಿ ಕುರಿತು ತಜ್ಞರೊಂದಿಗೆ ಇಂದು ಸಿಎಂ ಬೊಮ್ಮಾಯಿ ಸಭೆ

ಬೆಂಗಳೂರು: ಭಾರತದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಲು ಮುಂದಾಗಿದ್ದು, ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಅಗತ್ಯ ನಿರ್ಬಂಧಗಳು ಹಾಗೂ ಚಿಕಿತ್ಸೆಗೆ ಅಗತ್ಯವಿರುವ ಸಿದ್ಧತೆಗಳ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಹೊಸ ರೂಪಾಂತರದ ಸೋಂಕು ಹರಡುವಿಕೆಯನ್ನು ತಡೆಯಲು ಕಾರ್ಯತಂತ್ರಗಳ ಕುರಿತು ಚರ್ಚಿಸಲು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಸೋಂಕು ಹರಡುವಿಕೆಯನ್ನು ತಡೆಯಲು ಹೊಸ ಮಾರ್ಗಸೂಚಿಗಳ ಅವಶ್ಯಕತೆಯಿದೆ ಮತ್ತು ಶುಕ್ರವಾರದ ಸಭೆಯ ನಂತರ ಅವುಗಳ ಕುರಿತು ನಿರ್ಧರಿಸಲಾಗುತ್ತದೆ. ನಮಗೆ ತಿಳಿದುಬಂದಿರುವ ಮಾಹಿತಿಗಳ ಪ್ರಕಾರ ಹೊಸ ರೂಪಾಂತರಿ ಸೋಂಕು ಹರಡಿದರೂ ಸೋಂಕಿನಿಂದ ಆಸ್ಪತ್ರೆಗೆ ಸೇರಿಸುವ ಪರಿಸ್ಥಿತಿಗಳು ಎದುರಾಗುವುದಿಲ್ಲ ಎಂದು ತಿಳಿದುಬಂದಿದೆ. ಆದರೂ ನಾವು ವೈದ್ಯಕೀಯ ವರದಿ ಬಂದ ಕೂಡಲೇ ನಿಯಮಗಳಂತೆಯೇ ಚಿಕಿತ್ಸೆಗಳನ್ನು ನೀಡಲು ಕ್ರಮಗಳನ್ನು ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ.

ಸೋಂಕಿತರ ವೈದ್ಯಕೀಯ ವರದಿ ಶುಕ್ರವಾರ ನಮ್ಮ ಕೈ ಸೇರಲಿದ್ದು, ವರದಿಯನ್ನು ಪರಿಶೀಲಿಸಿದ ಬಳಿಕ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಕುರಿತು ಸ್ಪಷ್ಟ ಮಾಹಿತಿಗಳು ತಿಳಿದುಬರಲಿದೆ ಎಂದಿದ್ದಾರೆ.

ಗುರುವಾರ ಸಿಎಂ ಬೊಮ್ಮಾಯಿ ಅವರು ಮಾಂಡವಿಯಾ ಅವರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದರು. ಓಮಿಕ್ರಾನ್ ಸೋಂಕು ಪತ್ತೆಯಾಗುವುದಕ್ಕೂ ಮುನ್ನ ಹಾಗೂ ಸೋಂಕು ಪತ್ತೆಯಾದ ಬಳಿಕ ಎರಡು ಬಾರಿ ಮಾತುಕತೆ ನಡೆಸಿದರು. ಈ ವೇಳೆ ಓಮಿಕ್ರಾನ್ ಸೋಂಕು ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಬುಧವಾರವೇ ಸೋಂಕಿತರ ವರದಿಗಳು ಕೇಂದ್ರ ಸರ್ಕಾರಕ್ಕೆ ಲಭ್ಯವಾಗಿದ್ದು, ಗುರುವಾರ ಈ ಕುರಿತು ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

Latest Indian news

Popular Stories