ವಿಠಲ ಮಲೆಕುಡಿಯ ದೋಷ ಮುಕ್ತ

ಮಂಗಳೂರು: ನಕ್ಸಲರೊಂದಿಗೆ ಸಂಬಂಧ ಹೊಂದಿ ಅವರ ಚಟುವಟಿಕೆಗಳಿಗೆ ನೆರವಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಬೆಳ್ತಂಗಡಿಯ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಹಾಗು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲ ಮಲೆಕುಡಿಯನನ್ನು 2012 ಮಾ.3ರಂದು ನಕ್ಸಲ್ ನಿಗ್ರಹದಳ ಬಂಧಿಸಿತ್ತು. ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವಿಠಲ 6ನೇ ಹಾಗೂ ತಂದೆ ಲಿಂಗಣ್ಣ ಮಲೆಕುಡಿಯ 7ನೇ ಆರೋಪಿಗಳನ್ನಾಗಿ ದಾಖಲಿಸಲಾಗಿತ್ತು.

ಸುಮಾರು 4 ತಿಂಗಳು ಸೆರೆಮನೆ ವಾಸ ಅನುಭವಿಸಿದ ಜನರ್ಲಿಸಂ ವಿದ್ಯಾರ್ಥಿಯಾದ ವಿಠಲ ಮಲೆಕುಡಿಯ ಅವರು ನಂತರ ಜಾಮೀನು ಮೇಲೆ ಬಿಡುಗಡೆಗೊಂಡಿದ್ದರು. ಅಂದಿನ ಸರಕಾರ ವಿಠಲ ಮಲೆಕುಡಿಯ ಅವರ ಮೇಲೆ ಸಾಕಷ್ಟು ಸಾಕ್ಷ್ಮಾಧಾರ ಇಲ್ಲದ ಹಿನ್ನೆಲೆಯಲ್ಲಿ ಪ್ರಕರಣ ಕೈಬಿಡುವುದಾಗಿ ಹೇಳಿತ್ತು. ಈ ನಡುವೆ ಬೆಳ್ತಂಗಡಿ ಪೊಲೀಸರು ವಿಠಲ ಮಲೆಕುಡಿಯ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. 2012ರಿಂದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ವಿಠಲ ಮಲೆಕುಡಿಯ ಅವರ ಕತ್ಲೂರು ಮನೆಯಲ್ಲಿ ದೊರಕಿದ 21 ಸಾವಿರ ರೂ. ನಗದನ್ನು ನಕ್ಸಲ್ ಚಟುವಟಿಕೆಗಾಗಿ ಗ್ರಾಮಸ್ಥರಿಂದ ಸಂಗ್ರಹಿಸಿದ ಹಣ ಎಂದು ಪೊಲೀಸರು ಆರೋಪಿಸಿದ್ದರು. ಆದರೆ ವಿಠಲ ಮಲೆಕುಡಿಯ ಅವರು ಇದು ತನ್ನ ತಂದೆ – ತಾಯಿ ದುಡಿದ ಹಣ. ಅಪ್ಪ ಅಮ್ಮನಿಗೆ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಮನೆಯಲ್ಲೇ ಉಳಿತಾಯ ಮಾಡಿ ಕೂಡಿಟ್ಟ ಹಣ ಎಂದು ಸ್ಪಷ್ಟನೆ ನೀಡಿದ್ದರು.

ವಿಠಲ ಅವರು ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸಿದ್ದರು. ನಾರಾವಿ ಗ್ರಾಮ ಪಂಚಾಯಿತಿಯ 2ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು.

ಇದೀಗ ಪ್ರಕರಣ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪೂರ್ಣಗೊಂಡಿದ್ದು, ಇಂದು ತೀರ್ಪು ಹೊರಬಿದ್ದಿದೆ.

ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ದಿನೇಶ್ ಹೆಗ್ಡೆ ಉಳೇಪಾಡಿಯವರು ವಾದಿಸಿದ್ದಾರೆ.

Latest Indian news

Popular Stories