ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ಬದ್ಧ: ಅಮಿತ್‌ ಶಾ

ಹೊಸದಿಲ್ಲಿ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬದ್ಧವಾಗಿದ್ದು, ಎಲ್ಲ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜನಸಂಘದ ಕಾಲದಿಂದಲೂ ಸಮಾನ ನಾಗರಿಕ ಸಂಹಿತೆಗೆ ನಾವು ಬದ್ಧರಾಗಿದ್ದೇವೆ. ಬಿಜೆಪಿಯಲ್ಲಷ್ಟೇ ಅಲ್ಲ, ಸಂವಿಧಾನ ರಚನೆಗಾಗಿ ನಿರ್ಮಾಣವಾಗಿದ್ದ ಸಂವಿಧಾನ ಸಭೆಯಲ್ಲೂ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಒಲವು ವ್ಯಕ್ತವಾಗಿತ್ತು ಎಂದು ಸುದ್ದಿ ಮಾಧ್ಯಮವೊಂದರ ಸಂವಾದದಲ್ಲಿ ಅಮಿತ್‌ ಶಾ ಹೇಳಿದ್ದಾರೆ.

ಜಾತ್ಯತೀತ ದೇಶದಲ್ಲಿ ಎಲ್ಲ ಕಾನೂನುಗಳು ಒಂದೇ ಆಗಿರಬೇಕು. ಅವು ಧಾರ್ಮಿಕತೆಯ ಆಧಾರದ ಮೇಲೆ ಬೇರೆ ಬೇರೆಯಾಗಿರಬಾರದು ಎಂದು ಶಾ ಹೇಳಿದರು. ಸಂವಿಧಾನ ಸಭೆಯ ಈ ಅಭಿಪ್ರಾಯವನ್ನು ಸ್ವಾತಂತ್ರ್ಯ ನಂತರದ ಸರಕಾರಗಳು ಮರೆತವು. ಬಿಜೆಪಿ ಮಾತ್ರ ಈ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದರು. ಆದರೆ ಸಮಾನ ನಾಗರಿಕ ಸಂಹಿತೆಯನ್ನು ಏಕಾಏಕಿ ಜಾರಿ ಮಾಡಲು ಸಾಧ್ಯವಿಲ್ಲ. ಭಾರತ ಪ್ರಜಾಸತ್ತಾತ್ಮಕ ದೇಶವಾಗಿದ್ದು, ಇಲ್ಲಿ ಚರ್ಚೆಗಳನ್ನು ಮಾಡಬೇಕಾಗುತ್ತದೆ. ಈ ಬಳಿಕವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಾ ತಿಳಿಸಿದರು.
ಹಿಮಾಚಲ ಪ್ರದೇಶ, ಗುಜರಾತ್‌ ಮತ್ತು ದಿಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅವರು ಇದೇ ಸಂದರ್ಭ ವ್ಯಕ್ತಪಡಿಸಿದರು.

Latest Indian news

Popular Stories