ಕೋಳಿ ಫಾರಂನಲ್ಲಿ ಒಂದೇ ಕುಟುಂಬದ ನಾಲ್ವರ ಅನುಮಾನಾಸ್ಪದ ಮೃತ್ಯು

ದೊಡ್ಡಬಳ್ಳಾಪುರ: ಕೋಳಿಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಸೆ.16ರ ಶನಿವಾರ ರಾತ್ರಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹೊಲೆಯರಹಳ್ಳಿ ಬಳಿ ನಡೆದಿದೆ.

ಮೃತರನ್ನು ನೇಪಾಳ ಮೂಲದವರಾದ ಕಾಲೇ ಸರೇರಾ (60 ವರ್ಷ), ಲಕ್ಷ್ಮಿ ಸರೇರಾ (50 ವರ್ಷ), ಉಷಾ ಸರೇರಾ(40 ವರ್ಷ) ಹಾಗೂ ಪೂಲ್ಸರೇರಾ (16 ವರ್ಷ) ಎಂದು ಗುರುತಿಸಲಾಗಿದೆ.

ಗ್ರಾಮದ ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂನಲ್ಲಿ ಎಂಟು ದಿನದ ಹಿಂದಷ್ಟೇ ಈ ಕುಟುಂಬದವರು ಬಂದಿದ್ದು, ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದವರು ಸಾವನಪ್ಪಿದ್ದಾರೆ.

ಭಾನುವಾರ ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದು, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತ ಸಂಬಂಧಿಕರಿಗೆ ಕರೆ ಮಾಡಿದ್ದರು.

ಬಳಿಕ ಸಂಬಂಧಿಕರು ಅವರ ಶೆಡ್ ಕಿಟಕಿ ಬಳಿ ನೋಡಿದಾಗ ಮಲಗಿದ್ದವರು ಮಲಗಿದ್ದಂತೆಯೇ ಸಾವನಪ್ಪಿರುವುದು ಕಂಡುಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾತ್ರಿ ಸೊಳ್ಳೆ ಕಾಟ ಎಂದು ಆ ಕುಟುಂಬ ಇದ್ದಿಲು ಮೂಲಕ ಹೊಗೆ ಹಾಕಿದ್ದರು. ಶೆಡ್ ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನಲೆ, ಕೋಣೆ ತುಂಬಾ ಹೊಗೆ ತುಂಬಿಕೊಂಡು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Latest Indian news

Popular Stories