ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ದ | ಸಾರ್ವಜನಿಕರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ | ಜಿಲ್ಲಾಧಿಕಾರಿ ವೆಂಕಟರಾಜ್ ಮನವಿ

ಕೊಡಗು ಜಿಲ್ಲೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಏಪ್ರಿಲ್, 26 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಸಾರ್ವಜನಿಕರು ಪ್ರಜಾತಂತ್ರದ ಮತದಾನದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಮತದಾರರ ವಿವರ: 21-ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನಕ್ಕಾಗಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಟ್ಟು 4,70,766 ಮತದಾರರಿದ್ದು, 2,30,568 ಪುರುಷರು ಮತ್ತು 2,40,182 ಮಹಿಳಾ ಮತದಾರರು, 16 ಇತರ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 273 ಮತಗಟ್ಟೆಗಳಿದ್ದು, ಒಟ್ಟು 2,38,733 ಮತದಾರರಿದ್ದಾರೆ. ಇದರಲ್ಲಿ 1,16,143 ಪುರುಷರು ಮತ್ತು 1,22,581 ಮಹಿಳಾ ಮತದಾರರಿದ್ದಾರೆ. 9 ಮಂದಿ ಇತರ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 273 ಮತಗಟ್ಟೆಳಿದ್ದು, ಒಟ್ಟು 2,32,033 ಮತದಾರರಿದ್ದಾರೆ. ಇವರಲ್ಲಿ 1,14,425 ಪುರುಷ ಮತ್ತು 1,17,601 ಮಹಿಳಾ ಮತದಾರರು, 07 ಇತರ ಮತದಾರರು ಇದ್ದಾರೆ ಎಂದರು.

ಸಿಬ್ಬಂದಿಗಳ ವಿವರ: ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳಿದ್ದು, 604 ಪಿಆರ್‍ಒ, 604 ಎಪಿಆರ್‍ಒ, 1208 ಪಿಒ ಒಟ್ಟು 2,416 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, 302 ಪಿ.ಆರ್‍ಒ, 302 ಎಪಿಆರ್‍ಒ, 604 ಪಿ.ಒ ಒಟ್ಟು 1208 ಸಿಬ್ಬಂದಿಗಳು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, 302 ಪಿ.ಆರ್‍ಒ, 302 ಎಪಿಆರ್‍ಒ, 604 ಪಿ.ಒ ಒಟ್ಟು 1208 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

546 ಮತಗಟ್ಟೆಗಳಲ್ಲಿ ವಲ್ನರೇಬಲ್, ಕ್ರಿಟಿಕಲ್, ಎಲ್‍ಡಬ್ಲ್ಯುಇ 108 ಮತಗಟ್ಟೆಗಳಲ್ಲಿ ಸಿಎಪಿಎಫ್, ಮೈಕ್ರೋ ವೀಕ್ಷಕರು, ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ.

ಮಾದರಿ ನೀತಿ ಸಂಹಿತೆ: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಒಟ್ಟು 32 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಾಗಿರುತ್ತದೆ. ಒಟ್ಟು 16,54,220 ರೂ. ನಗದು ಹಾಗೂ 42,318.805 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ರೂ. 1,27,51,986 ಗಳಾಗಿದೆ. ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ 4.605 ಕೆ.ಜಿ. ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 98 ಸಾವಿರಗಳಾಗಿದೆ.

*ವಿಶೇಷ ಮತಗಟ್ಟೆಗಳ ಮಾಹಿತಿ:* ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 10 ಸಖಿ ಬೂತ್‍ಗಳು, 06 ಸಾಂಪ್ರದಾಯಿಕ ಮತಗಟ್ಟೆಗಳು, 02 ವಿಶೇಷಚೇತನ ಮತಗಟ್ಟೆಗಳು, 02 ಯುವ ಮತದಾರರ ಮತಗಟ್ಟೆಗಳು ಮತ್ತು 3 ಥೀಮ್ ಬೇಸ್‍ಡ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳು ಸಾರ್ವಜನಿಕರ ಆಕರ್ಷಣೀಯ ಮತಗಟ್ಟೆಗಳಾಗಲಿದ್ದು, ಮತದಾನದ ಪ್ರಮಾಣ ಹೆಚ್ಚಿಸಲು ವಿಶೇಷ ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ ಎಂದರು.

ವಾಹನಗಳ ವಿವರ: ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಿಗೆ ತೆರಳಲು ವಾಹನಗಳನ್ನು ನಿಯೋಜಿಸಲಾಗಿದೆ. ಒಟ್ಟು 80 ಕೆಎಸ್‍ಆರ್‍ಟಿಸಿ ಬಸ್ಸುಗಳು, 47 ಮಿನಿ ಬಸ್ಸು, 74 ಜೀಪು ಮತ್ತು 13 ಮ್ಯಾಕ್ಸಿ ಕ್ಯಾಬ್‍ಗಳನ್ನು ನಿಯೋಜಿಸಲಾಗಿದೆ ಎಂದರು.

ಮತಗಟ್ಟೆ ವ್ಯಾಪ್ತಿಯ 200 ಮೀಟರ್ ಸುತ್ತಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ, ಅಭ್ಯರ್ಥಿಗಳಿಗೆ ಹಾಗೂ ಏಜೆಂಟರ್‍ಗಳು ಎಲ್ಲರಿಗೂ ಸೇರಿದಂತೆ ಪ್ರಚಾರ ನಿಷೇಧಿಸಿದೆ. ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಆಗಮಿಸಿ ಅರ್ಹರಿಗೆ ತಮ್ಮ ಮತವನ್ನು ಚಲಾಯಿಸಬೇಕು. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 438 ಪಿಸಿ/ಹೋಮ್ ಗಾಡ್ರ್ಸ್‍ಗಳನ್ನು ನಿಯೋಜಿಸಲಾಗಿದ್ದು, 28 ಸಿಎಪಿಎಫ್, 108 ಮೈಕ್ರೋ ವೀಕ್ಷಕರು, 04 ವಿಡಿಯೋ ಕ್ಯಾಮೇರಾ ಮತ್ತು 108 ವೆಬ್‍ಕ್ಯಾಸ್ಟಿಂಗ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಉಪಸ್ಥಿತರಿದ್ದರು.

Latest Indian news

Popular Stories