ವಿಜಯಪುರ: ಜಿಎಸ್‌ಟಿ ಮರುಪಾವತಿ ಕರ್ನಾಟಕಕ್ಕೆ ಅನ್ಯಾಯ : ರಾಹುಲ್ ಗಾಂಧಿ ಕಿಡಿ

ವಿಜಯಪರ : ಜಿಎಎಸ್‌ಟಿ ಮರುಪಾವತಿ ವಿಷಯವಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧೀ ತೀವ್ರ ಅಸಮಧಾನ ಹೊರಹಾಕಿದರು. ಜೊತೆಗೆ ಇಂಡಿಯಾ ಒಕ್ಕೂಟದ ಅಧಿಕಾರಕ್ಕೆ ಬಂದರೆ ಈ ಅನ್ಯಾಯ ಸರಿಪಡಿಸುವುದಾಗಿ ಅಭಯ ನೀಡಿದರು.


ವಿಜಯಪುರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿಗೊಳಿಸಲಾಗಿದೆ, ಕರ್ನಾಟಕ ಸರ್ಕಾರ ಜಿಎಸ್‌ಟಿ ರೂಪದಲ್ಲಿ 100 ರೂ. ಕೊಟ್ಟರೆ ನಿಮಗೆ 13 ರೂ. ಮಾತ್ರ ಕೇಂದ್ರ ಸರ್ಕಾರ ವಾಪಾಸ್ಸು ನೀಡುತ್ತಿದೆ, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಈ ಅನ್ಯಾಯವನ್ನು ಸರಿಪಡಿಸಲು ನಾವು ಬದ್ಧ ಎಂದು ರಾಹುಲ್ ಗಾಂಧಿ ಉದ್ಘೋಷಿಸಿದರು.


ಭಾರತ ಇತಿಹಾಸದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಸಾಮಾನ್ಯವಾದ ಚುನಾವಣೆಯಲ್ಲ, ಒಂದು ಪಕ್ಷ, ಒಂದು ವ್ಯಕ್ತಿ ಹಿಂದೂಸ್ತಾನದ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ನಿರ್ನಾಮೊಗಳಿಸುವ ಪ್ರಯತ್ನದಲ್ಲಿ ತೊಡಗಿದೆ, ಸಂವಿಧಾನದಿಂದ ಭಾರತೀಯ ನಾಗರಿಕರಿಗೆ, ಧ್ವನಿ, ಅಧಿಕಾರ, ಮೀಸಲಾತಿ ದೊರಕಿದೆ, ಸಂವಿಧಾನ ಪೂವದಲ್ಲಿ ರಾಜ-ಮಹಾರಾಜರ ಆಳ್ವಿಕೆ ಇತ್ತು, ಆದರೆ ಬಡವರ, ದಲಿತ, ಆದಿವಾಸಿಗಳ ಬಳಿ ಅಧಿಕಾರ, ಹಕ್ಕು ಹಾಗೂ ಧ್ವನಿ ಇದ್ದರೆ ಅದಕ್ಕೆ ಸಂವಿಧಾನವೇ ಕಾರಣ. ಸಂವಿಧಾನದ ರಕ್ಷಣೆಯೇ ನಮ್ಮ ಆದ್ಯತೆ ಎಂದರು.
ಒಂದೆಡೆ ನರೇಂದ್ರ ಮೋದಿ ಅವರು ಸಂವಿಧಾನವನ್ನು ನಿರ್ನಾಮಗೊಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ, ಅವರ ಪಕ್ಷದ ಸಂಸದರೇ ಸಂವಿಧಾನವನ್ನು ಬದಲಿಸುವ ಹೇಳಿಕೆಗಳನ್ನು ಹಲವಾರು ಬಾರಿ ಹೇಳಿದ್ದಾರೆ, ಇನ್ನೊಂದೆಡೆ ಇಂಡಿಯಾ ಒಕ್ಕೂಟದ ಪಕ್ಷಗಳು ಭಾರತೀಯ ಸಂವಿಧಾನ ಹಾಗೂ ಅಣ್ಣ ಬಸವಣ್ಣನ ಆಶಯ ಹಾಗೂ ವಿಚಾರಧಾರೆಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.


ಮೋದಿಜಿ ಅವರು ಕಳೆದ 10 ವರ್ಷಗಳಲ್ಲಿ 25 ಜನರನ್ನು ಅರಬ್ ಪತಿಗಳನ್ನಾಗಿ ಮಾಡಿದ್ದಾರೆ, ಭಾರತದ ಸಂಪತ್ತು, ಭಾರತದ ಎಲ್ಲ ಲಾಭವನ್ನು ಅದಾನಿದಂತಹ ಜನರಿಗೆ ನೀಡಿದ್ದಾರೆ, ಭಾರತ ಸೌರಶಕ್ತಿ, ಪವನಶಕ್ತಿ, ವಿಮಾನ ನಿಲ್ದಾಣ ಮೊದಲಾದವುಗಳೆಲ್ಲವೂ ಅದಾನಿಯಂತಹ ಉದ್ಯಮಪತಿಗಳ ಹಿಡಿತಕ್ಕೆ ನೀಡಿರುವುದು ದುರ್ದೈವ ಎಂದು ರಾಹುಲ್ ಗಾಂಧೀ ಉಲ್ಲೇಖಿಸಿದರು.


ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬಡವರಿಗೆ ಏನೂ ದೊರಕಿಲ್ಲ, ನಾವು ಪಂಚ ಗ್ಯಾರಂಟಿಗಳನ್ನು ನೀಡಿದ ಫಲವಾಗಿ ಬಡವರಿಗೆ ದೊಡ್ಡ ವರವಾಗಿ ಪರಿಗಣಿತವಾಗದೆ,
ಅವರು ಕೇವಲ 25 ಜನ ಅರಬ್‌ಪತಿಗಳನ್ನು ಸೃಷ್ಟಿ ಮಾಡಿದೆ, ನಮ್ಮ ಲಕ್ಷ್ಯ ಬೇರೆ, ಲಕ್ಷ ಲಕ್ಷ ಜನರಿಗೆ ಕೋಟ್ಯಾಧಿಪತಿಗಳನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.
ಗೃಹಲಕ್ಷ್ಮೀ ಜಾರಿಯಾದರೆ ಕರ್ನಾಟಕ ಆರ್ಥಿಕ ದಿವಾಳಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು, ಆದರೆ ಏನೂ ಆಗಲಿಲ್ಲ ಎಂದರು.


ರಾಜ್ಯದ 1 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಪ್ರಯೋಜನ ದೊರಕುತ್ತಿದೆ, ಮಹಿಳೆ ದೇಶ ಭವಿಷ್ಯವನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು, ಪುರುಷರು 8 ತಾಸು ದುಡಿದರೆ, ಸ್ತ್ರೀ 16 ಗಂಟೆ ಕೆಲಸ ಮಾಡುತ್ತಾಳೆ, ಔದ್ಯಮಿಕ ಜವಾಬ್ದಾರಿ ನಿಭಾಯಿಸಿ ನಂತರ ಬಂದು ಮನೆಯ ಜವಾಬ್ದಾರಿ ನಿಭಾಯಿಸುವ ಸ್ತ್ರೀ 16 ಗಂಟೆಗಳ ಕಾಲ ದುಡಿಯುತ್ತಾಳೆ, ಹೀಗಾಗಿ ಸ್ತ್ರೀಯರಿಗೆ ಅಭಯ ತುಂಬುವ ರೂಪವಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೊಳಿಸಲಾಗಿದೆ ಎಂದರು. ಇಂದು ಕೈ ಜೋಡಿಸಿ ಯುವಕರು ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ, ಆದರೆ ಉದ್ಯೋಗ ದೊರಕುತ್ತಿಲ್ಲ ಎಂದರು.


ಖಾಸಗಿ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವೇ ಯುವಕರಿಗೆ ಅಪ್ರೆಂಟಿಸ್ ತರಬೇತಿ ನೀಡುವ ದೊಡ್ಡ ಮಹತ್ವಾಕಾಂಕ್ಷೆಯನ್ನು ಇಂಡಿಯಾ ಒಕ್ಕೂಟ ಹೊಂದಿದೆ ಎಂದರು.


ನರೇಗಾ ಮಾದರಿಯಲ್ಲಿ ಡಿಪ್ಲೋಮಾ ಮೊದಲಾದ ವೃತ್ತಿಪರ ಕೋರ್ಸ್ ಪೂರೈಸಿದ ಯುವಕರಿಗೆ ಸರ್ಕಾರದಿಂದ 1 ವರ್ಷದ ಉದ್ಯೋಗದ ಅಪ್ರೆಂಟಿಸ್‌ನ್ನು ಕೇಳುವ ಹಕ್ಕುಗಳನ್ನು ನೀಡುವ ಮೂಲಕ ಅವರಿಗೆ ಬಲ ತುಂಬಲಾಗುವುದು, ಇದರಿಂದ ಕೌಶಲ್ಯ ಹಾಗೂ ತರಬೇತಿ ಪಡೆದ ಕೋಟಿ ಕೋಟಿ ಯುವಕರ ಶಕ್ತಿ ದೊರಕಲಿದೆ ಎಂದರು.


ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಒಂದೇ ಒಂದು ರೂ. ರೈತರ ಸಾಲಮನ್ನಾ ಮಾಡಿಲ್ಲ, ಎಂಎಸ್‌ಪಿ ಆಧರಿಸಿದ ದರ ನೀಡಿಲ್ಲ, ಆದರೆ ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬಂದ ತಕ್ಷಣವೇ ರೈತರ ಸಾಲಮನ್ನಾ ಮಾಡುವ ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಆಧರಿಸಿದ ದರ ನೀಡುವ ಸಂಕಲ್ಪ ಮಾಡಲಾಗಿದೆ ಎಂದರು.


ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ದ್ವಿಗುಣ ಹಾಗೂ ನರೇಗಾ ಗೌರವಧನವನ್ನು 400 ರೂ. ಗಳಿಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಅಗ್ನಿವೀರ ಯೋಜನೆ ಭಾರತೀಯ ಸೈನ್ಯಕ್ಕೆ ಮಾಡುವ ಅಪಮಾನ, ಹೀಗಾಗಿ ಈ ಯೋಜನೆಯನ್ನು ನಾವು ರದ್ದುಗೊಳಿಸಲಿದ್ದೇವೆ, ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ವಿಂಗಡನೆ ಮಾಡುವುದಿಲ್ಲ ಎಂದರು.
ಅರಬ್‌ಪತಿಗಳಿಗೆ ನೀಡುವ ಹಣವನ್ನೇ ನಾವು ದೇಶದ ಬಡಜನರಿಗೆ ಒದಗಿಸುವ ದಿವ್ಯ ಸಂಕಲ್ಪವನ್ನು ಇಂಡಿಯಾ ಒಕ್ಕೂಟ ನೀಡಲಿದೆ.

ಮೋದಿ ಅವರಿಗೆ ಕಣ್ಣೀರು ಬರಬಹುದು
ಮೋದಿಜಿ ಅವರು ಸಂಪೂರ್ಣ ಭಯಭೀತರಾಗಿದ್ದಾರೆ, ಹೀಗಾಗಿ ಕೆಲವೇ ದಿನಗಳಲ್ಲಿ ಮೋದಿಜಿ ಅವರಿಗೆ ವೇದಿಕೆಯಲ್ಲಿಯೇ ಕಣ್ಣೀರು ಸುರಿಸಿದರೂ ಸುರಿಸಬಹುದು, ಪಾಕಿಸ್ತಾನ, ಚೈನಾ ಮಾತು ಆಡಬಹುದು, ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಇಲ್ಲವೇ ಚಪ್ಪಾಳೆ ಹೊಡೆಯಿರಿ ಎಂದು ಹೇಳುವ ದಿನ ದೂರವಿಲ್ಲ, ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಕೆಲಸವನ್ನು ಮಾಡಬಹುದು ಎಂದು ರಾಹುಲ್ ಗಾಂಧೀ ಮೋದಿ ಅವರು ವಿರುದ್ಧ ಲೇವಡಿ ಮಾಡಿದರು.

ಕಟಾಕಟ್ ಕಟಾಕಟ್ ಹಣ ಅಕೌಂಟ್‌ಗೆ ಜಮೆ….
ಚುನಾವಣೆ ನಂತರ ಇಂಡಿಯಾ ಒಕ್ಕೂಟದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಎಲ್ಲ ಬಡವರ ಪಟ್ಟಿ ತಯಾರಲಾಗಲಿದ್ದು, ಬಡ ಕುಟುಂಬದ ಮಹಿಳೆಯನ್ನು ಆಯ್ಕೆ ಮಾಡಿ, ಆ ಮಹಿಳೆಯ ಅಕೌಂಟ್‌ಗೆ ಕೇಂದ್ರ ಸರ್ಕಾರ ಪ್ರತಿ ವರ್ಷ 1 ಲಕ್ಷ ರೂ. ಹಣ ನೀಡಲಾಗುವುದು ಎಂದು ಮತ್ತೊಮ್ಮೆ ಘೋಷಿಸಿದರು.
`ಕಟಾಕಟ್ ಎಂದು ಜಮಾ ಆಗಲಿವೆ…’ ಪ್ರತಿ ತಿಂಗಳು ಒಂದನೇಯ ತಾರಿಖು ನೋಡಿದರೆ 10,500 ರೂ. ಜಮಾವಣೆಯಾಗಲಿದೆ, ಆ ಕುಟುಂಬ ಬಡತನದಿಂದ ಹೊರಬರುವವರೆಗೂ ಕಟಾಕಟ್ ಅಕೌಂಟ್‌ಗೆ ಜಮಾವಣೆಯಾಗಲಿದೆ ಎಂದು ಹಾಸ್ಯದ ಶೈಲಿಯೊಂದಿಗೆ ಹೇಳಿದರು.

ಒಣದ್ರಾಕ್ಷಿಯ ಗೌರವ:
ಪ್ರಚಾರ ಸಭೆಗೆ ಆಗಮಿಸಿದ ರಾಹುಲ್ ಗಾಂಧೀ ಹಾಗೂ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲಾ ಅವರಿಗೆ ವಿಜಯಪುರ ಜಿಲ್ಲೆಯ ರೈತ ಸಿರಿಯನ್ನು ಪ್ರತಿನಿಧಿಸುವ ಸಂಕೇತವಾಗಿ ಒಣದ್ರಾಕ್ಷಿಯ ಹಾರವನ್ನು ಸಚಿವದ್ವಯರಾದ ಡಾ.ಎಂ.ಬಿ ಪಾಟೀಲ ಹಾಗೂ ಶಿವಾನಂದ ಪಾಟೀಲ ಅವರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿದರು.


ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ, ಸಕ್ಕರೆ-ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಪ್ರಕಾಶ ರಾಠೋಡ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಮಾಜಿ ಶಾಸಕರಾದ ಡಾ.ಮಕ್ಬೂಲ್ ಬಾಗವಾನಮ, ಶರಣಪ್ಪ ಸುಣಗಾರ, ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಉಪಮೇಯರ್ ದಿನೇಶ ಹಳ್ಳಿ, ವಿದ್ಯಾರಾಣಿ ತುಂಗಳ, ಶ್ರೀಕಾಂತ ಛಾಯಾಗೋಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest Indian news

Popular Stories