ಹಾಸನ ಲೈಂಗಿಕ ಹಗರಣ |ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ರಚನೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಸಿಕ್ಕಿರುವ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಇಂದು ಭಾನುವಾರ ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ ಐಟಿ ತಂಡ ರಚಿಸಲಾಗಿದೆ. ನಾವು ಅವರ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಇದ್ದು ಅವರಿಗೆ ನೊಟೀಸ್ ನೀಡಿ ಕರೆಸಿ ತನಿಖೆ ಮಾಡುವ ಬಗ್ಗೆ ಹಿರಿಯ ಪೊಲೀಸ್ ತನಿಖಾಧಿಕಾರಿಗಳೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಎಡಿಜಿಪಿ ಬಿ.ಕೆ ಸಿಂಗ್ ಅವರು ಈ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದರು. 3 ಎಸ್ ಪಿ, 4 ಡಿವೈಎಸ್ ಪಿ ಗಳನ್ನೊಳಗೊಂಡ ಎಸ್ಐಟಿ ರಚನೆಯಾಗಿದ್ದು, ಮೂವರು ಎಸ್ ಪಿಗಳಲ್ಲಿ ಓರ್ವ ಮಹಿಳಾ ಎಸ್ ಪಿಗೆ ಕೂಡ ಇದ್ದಾರೆ ಎಂದರು.

ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಹಲವು ವಿಡಿಯೊಗಳು ಎರಡು ಮೂರು ಪೆನ್‌ಡ್ರೈವ್‌ಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಹರಿದಾಡುತ್ತಿವೆ ಎಂದು ಸಾಮಾಜಿಕ ಜಲತಾಣದಲ್ಲಿ ಚರ್ಚೆ ಆಗುತ್ತಿತ್ತು. ಒಂದಲ್ಲ, ಎರಡಲ್ಲ ಸಾವಿರಾರು ವಿಡಿಯೋಗಳಿವೆ ಎಂದು ಹೇಳಲಾಗಿದೆ. ಹಲವು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಟ್ವಿಟರ್ ಸೇರಿದಂತೆ ಸೋಷಿಯಲ್ ಮಿಡಿಯಾಗಳ ಮೂಲಕವೂ ವಿಡಿಯೋ ವೈರಲ್ ಆಗುತ್ತಿವೆ. ಆದರೆ ಇದು ಮಾರ್ಫ್ ಮಾಡಲಾದ ವಿಡಿಯೋ ಎಂದು ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದರು. ಆದರೆ ಇನ್ನೊಂದೆಡೆ ಇದು ನೈಜ ವಿಡಿಯೋ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ಮಹಿಳಾ ಆಯೋಗದ ಕೈ ಸೇರಿತ್ತು. ಇದರ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂಗೆ ಪತ್ರ ಬರೆದಿದ್ದರು.

Latest Indian news

Popular Stories