2023ರಲ್ಲಿ ಮುಸ್ಲಿಮರ ವಿರುದ್ಧ 255 ದ್ವೇಷ ಭಾಷಣ; ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಹೆಚ್ಚು: ವರದಿ

ಬೆಂಗಳೂರು: ಆತಂಕಕಾರಿ ಬೆಳವಣಿಗೆಯಲ್ಲಿ, 2023 ರ ಮೊದಲಾರ್ಧದಲ್ಲಿ ಪ್ರತಿದಿನ ಒಂದಕ್ಕಿಂತ ಹೆಚ್ಚು ದ್ವೇಷ ಭಾಷಣ ಅಥವಾ ಮುಸ್ಲಿಮರನ್ನು ಗುರಿಯಾಗಿಸಿದ ರ್ಯಾಲಿಗಳು ನಡೆದಿವೆ ಎಂದು ಹಿಂದುತ್ವ ವಾಚ್‌ ವರದಿ ಮಾಡಿದೆ.

2023 ರ ಮೊದಲ ಆರು ತಿಂಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಒಟ್ಟು 255 ದ್ವೇಷ ಭಾಷಣ ಸಭೆಗಳು ಅಥವಾ ರ್ಯಾಲಿಗಳು ನಡೆದಿದ್ದು, ಈ ಪೈಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಹೆಚ್ಚು ವರದಿಯಾಗಿವೆ ಎಂದು ಹಿಂದುತ್ವ ವಾಚ್ ಹೇಳಿದೆ.

ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 205 (ಶೇ. 80) ದ್ವೇಷ ಭಾಷಣದ ಘಟನೆಗಳು ನಡೆದಿವೆ ಎಂದು ವಾಷಿಂಗ್ಟನ್ ಡಿಸಿ ಮೂಲದ ಸಂಶೋಧನಾ ತಂಡ ಹೇಳಿದೆ.

ದ್ವೇಷ ಭಾಷಣದ ಘಟನೆಗಳು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಡೆದಿವೆ, ನಂತರ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಉತ್ತರಾಖಂಡವು ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ, ಈ ವರ್ಷ ಸುಮಾರು ಶೇಕಡಾ 5 ರಷ್ಟು ದ್ವೇಷ ಭಾಷಣದ ಪ್ರಕರಣಗಳು ವರದಿಯಾಗಿವೆ ಎಂದು ಹಿಂದುತ್ವ ವಾಚ್ ತಿಳಿಸಿದೆ.

2014 ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಮುಸ್ಲಿಂ ವಿರೋಧಿ ಭಾಷಣ ಮಾಡುವ ಪ್ರವೃತ್ತಿ ಹೆಚ್ಚಿರುವುದನ್ನು ಸಂಶೋಧಕರು ಗಮನಿಸಿದ್ದಾರೆ. ಈ ವರ್ಷ ದಾಖಲಿತ ಘಟನೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಆಡಳಿತಾರೂಢ ಬಿಜೆಪಿ ಮತ್ತು ಬಜರಂಗ ದಳ ಸೇರಿದಂತೆ ಸಂಘಪರಿವಾರದಿಂದಲೇ ನಡೆದಿರುವುದನ್ನು ವರದಿಯು ಕಂಡುಹಿಡಿದಿದೆ.

ಹಿಂದುತ್ವ ವಾಚ್ 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಚಟುವಟಿಕೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಈ ವರದಿ ತಯಾರಿಸಿದೆ. ಆದರೆ ಈ ವರದಿ ಸಂಪೂರ್ಣ ಆಧಾರ ರಹಿತ ಎಂದಿರುವ ಬಿಜೆಪಿ ನಾಯಕ ಅಭಯ್ ವರ್ಮಾ ಅವರು, ನಾವು ದೇಶ ಮತ್ತು ಜನರನ್ನು ಅವರ ಧರ್ಮಗಳ ಆಧಾರದ ಮೇಲೆ ವಿಭಜಿಸುವುದಿಲ್ಲ ಮತ್ತು ದ್ವೇಷ ಭಾಷಣಕ್ಕೆ ಬಿಜೆಪಿಯ ಬೆಂಬಲವಿಲ್ಲ ಎಂದು ಹೇಳಿದ್ದಾರೆ.

Latest Indian news

Popular Stories