ಚಿಲ್ಲರೆ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ, ತಾಕತ್ತಿದ್ದರೆ ಬಹಿರಂಗ ಚರ್ಚೆ ಬರಲಿ: ಹೆಚ್’ಡಿ.ದೇವೇಗೌಡಗೆ ಡಿಕೆಶಿ ಸವಾಲು

ಬೆಂಗಳೂರು: 9 ವರ್ಷದ ಮಗುವನ್ನು ಅಪಹರಣ ಮಾಡಿ, ಅವರ ತಂದೆ ತಾಯಿಯಿಂದ ಆಸ್ತಿಪಡಿಸಿಕೊಳ್ಳಲಾಗಿದೆ ಎಂಬ ಮಾಜಿ ಪ್ರಧಾನಮಂತ್ರಿ ಹೆಚ್’ಡಿ.ದೇವೇಗೌಡ ಆರೋಪದ ವಿರುದ್ಧ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಕೆಂಡಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಬಹಿರಂಗ ಚರ್ಚೆಗೆ ಆಹ್ವಾನ ಕೊಟ್ಟಿದ್ದೇನೆ. ತಾಕತ್ತಿದ್ದರೆ ಬಹಿರಂಗವಾಗಿ ಚರ್ಚೆಗೆ ಬರಲಿ. ಇಲ್ಲವಾದರೆ ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಆರೋಪ ಮಾಡಿರುವ ಅವರು ಸಾಕ್ಷ್ಯವನ್ನು ಬಿಡುಗಡೆ ಮಾಡಲಿ, ನಾನು ತಪ್ಪು ಮಾಡಿದ್ದರೆ, ನಾನು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧನಿದ್ದೇನೆ, ನಾನು ಮೂರ್ಖನಲ್ಲ ಮತ್ತು ಅವರ (ಗೌಡರ) ಚಿಲ್ಲರೆ (ಅಗ್ಗದ) ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಬಯಸುವುದೂ ಇಲ್ಲ. ಅವರಿಗೆ ತಾಕತ್ತಿದ್ದರೆ ಬೇರೆ ಯಾವುದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ವಿಧಾನಸಭೆಯಲ್ಲೂ ಇದಕ್ಕೆ ಉತ್ತರಿಸುತ್ತೇನೆ ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ಅಮೆರಿಕದಲ್ಲಿ ದುಡಿದು ತಂದಿದ್ದ ಹಣದಲ್ಲಿ ಉದ್ಯಮಿಯೊಬ್ಬರು ಬಿಡದಿ ಬಳಿ ಐ.ಟಿ ಕಂಪನಿ ಸ್ಥಾಪನೆ ಮಾಡಲು ಮುಂದಾಗಿದ್ದರು. ಅದರ ಹಿಂದಿನ ದಿನ ಇವರು ಸುಳ್ಳು ಕ್ರಯಪತ್ರ ಸಿದ್ಧಡಿಸಿದ್ದರು. ನನ್ನ ಬಳಿ ದಾಖಲೆ ಇದೆ ಎಂದು ಅದನ್ನು ಮುಂದಿಟ್ಟುಕೊಂಡು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಎರಡೂ ಕಡೆ ಮುಖಭಂಗವಾದ ಬಳಿಕ ಆ ವ್ಯಕ್ತಿಯ ಮಗಳನ್ನು ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪದ ಪಕ್ಕದ ಮನೆಯಲ್ಲಿ ಒಂಬತ್ತು ದಿನ ಇಟ್ಟಿದ್ದರು. ಆಸ್ತಿ ಪತ್ರಕ್ಕೆ ಸಹಿ ಹಾಕಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಧಮ್ಕಿ ಹಾಕಿದ್ದರು. ಅಲ್ಲಿಗೆ ಹೋದಾಗ, ಆ ಮಗುವನ್ನ ದೂರ ಕೂರಿಸಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತೆ, ಮತ್ತೆ ಆ ಮಗುವನ್ನ ಒಳಗೆ ಕರೆದುಕೊಂಡು ಹೋಗುತ್ತಾರೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿ ಅಂತ ಲಾಯರ್ ತಂದು ಕೊಟ್ಟರು.

ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ವೋಟರ್ ಲಿಸ್ಟ್ ನಲ್ಲಿ ಇಲ್ಲ. ಈ ಕರ್ನಾಟಕದ ಸಹವಾಸ ಸಾಕು ಅಂತಾರೆ. ನನಗೆ ಅವರ ಹೆಸರು ಮರೆತು ಹೋಗಿದೆ. ಆಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

Latest Indian news

Popular Stories