ಬೆಂಗಳೂರಿನಲ್ಲಿ ಧಾರಾಕಾರ ಮಳೆ: ನಾಳೆ ರಾಜ್ಯದ 6 ಜಿಲ್ಲೆಗಳಲ್ಲಿ ಭಾರೀ ಮಳೆ; ‘ಯೆಲ್ಲೊ ಅಲರ್ಟ್‌’ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಕಡೆ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ, ವಿಜಯನಗರ, ರಾಜಾಜಿನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್.ಎಸ್.ಆರ್ ಲೇಔಟ್, ಬೆಳ್ಳಂದೂರು, ವರ್ತೂರು, ಸರ್ಜಾಪುರ, ಮಾರತ್ಹಳ್ಳಿ, ಕಾಡುಗೋಡಿ, ವೈಟ್ ಫೀಲ್ಡ್, ಕೆ.ಆರ್.ಪುರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.

ಧಾರಾಕಾರ ಮಳೆಯಿಂದ ಭಾರಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಮನೆಗೆ ತೆರಳಲು ಪರದಾಡುತ್ತಿದ್ದಾರೆ. ನಗರದ ಹಲವು ಅಂಡರ್ ಪಾಸ್ ಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ನವೆಂಬರ್ 7 ಮತ್ತು 8ರಂದು ಕರಾವಳಿ ಜಿಲ್ಲೆಗಳ ಅಲ್ಲಲ್ಲಿ 64.5ಮಿ.ಮೀ.ನಿಂದ 115.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಮಂಗಳವಾರ ಹಾಗೂ ಬುಧವಾರ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಗುಡುಗಿನ ಜೊತೆಗೆ ಮೇಲೆ ಗಾಳಿ ಬಲವಾಗಿ ಬೀಸುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Latest Indian news

Popular Stories