ಲಿಂಗಾಯತ ಸ್ವಾಮೀಜಿ ಸ್ಪರ್ಧೆ | ಜೋಶಿಗೆ ತಲೆನೋವು

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ 1996 ರಿಂದ ಧಾರವಾಡ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದೆ. ಸತತ ಏಳು ಬಾರಿ ಗೆದ್ದಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಬಯಸಿದೆ, ಆದರೆ ಈ ಬಾರಿ ಕೇಸರಿ ಪಕ್ಷದಿಂದ ಕಿತ್ತುಕೊಳ್ಳಲು ಕಾಂಗ್ರೆಸ್ ಎಲ್ಲಾ ತಂತ್ರಗಳನ್ನು ಬಳಸುತ್ತಿದೆ. ಇದರ ಜೊತೆಗೆ ಲಿಂಗಾಯತ ಸ್ವಾಮೀಜಿ ಕಣಕ್ಕೆ ಇಳಿದಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ ಐದನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದೆಡೆ, 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಯೂತ್ ಕಾಂಗ್ರೆಸ್ ನಾಯಕ ವಿನೋದ್ ಅಸೂಟಿ ಕಾಂಗ್ರೆಸ್ ಪರ ಅಭ್ಯರ್ಥಿಯಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಇಬ್ಬರು ಅಭ್ಯರ್ಥಿಗಳಿಗೆ ಶಿರಹಟ್ಟಿ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮಿ ಸವಾಲು ಹಾಕುತ್ತಿದ್ದಾರೆ.

ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಹುಬ್ಬಳ್ಳಿ-ಧಾರವಾಡ ಪೂರ್ವ, ಧಾರವಾಡ, ನವಲಗುಂದ ಮತ್ತು ಕಲಘಟಗಿಯಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಹಾವೇರಿ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಸೆಂಟ್ರಲ್, ಕುಂದಗೋಳ ಮತ್ತು ಶಿಗ್ಗಾಂವದಲ್ಲಿ ಬಿಜೆಪಿ ಗೆದ್ದಿದೆ. ಆದರೆ ಬಿಜೆಪಿ ಕಾರ್ಯಕರ್ತ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರ ಬೆಂಬಲದಿಂದ ಕಾಂಗ್ರೆಸ್ ವಂಚಿತವಾಗಿದೆ.

ಕ್ಷೇತ್ರದ ಜಾತಿ/ಧರ್ಮ ಸಂಯೋಜನೆಯು ರಾಷ್ಟ್ರೀಯ ಪಕ್ಷಗಳು ಕಣಕ್ಕಿಳಿಸಿರುವ ಅಭ್ಯರ್ಥಿಗಳಿಗೆ ಸಾಕಷ್ಟು ವ್ಯತಿರಿಕ್ತವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತರು ಮತ್ತು ಮುಸ್ಲಿಮ ಮತದಾರರಿದ್ದಾರೆ , ಪ್ರಹ್ಲಾದ್ ಜೋಶಿ ಬ್ರಾಹ್ಮಣರಾಗಿದ್ದರೆ, ಅಸೂಟಿ ಕುರುಬ (ಒಬಿಸಿ) ಸಮುದಾಯದಿಂದ ಬಂದವರು. ಜಾತಿ ಸಮೀಕರಣವು ಲಿಂಗಾಯತ ಮಠದ ಮುಖ್ಯಸ್ಥರಾಗಿರುವ ಸ್ವತಂತ್ರ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮಿ ಪರವಾಗಿ ಮಾತ್ರ ಕೆಲಸ ಮಾಡಬಹುದು ಎನ್ನಲಾಗಿದೆ.

2004 ರಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೋಶಿ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಪ್ರಚಾರದುದ್ದಕ್ಕೂ, ಭರವಸೆಗಳನ್ನು ಈಡೇರಿಸುವಲ್ಲಿ ಎನ್‌ಡಿಎ ಸರ್ಕಾರದ ಟ್ರ್ಯಾಕ್ ರೆಕಾರ್ಡ್‌ಗೆ ಜೋಶಿ ಒತ್ತು ನೀಡುತ್ತಿದ್ದಾರೆ. ಅವರ ಕಾರ್ಯವೈಖರಿ, ಕ್ಲೀನ್ ಇಮೇಜ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಿಂದಾಗಿ ಜೋಶಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಆದರೆ, ಕಾಂಗ್ರೆಸ್ ಅಭ್ಯರ್ಥಿ ಅಸೂಟಿ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಖಾತ್ರಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿರುವ ಅಹಿಂದ ಗುಂಪಿನ ಬೆಂಬಲವನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಶಿರಹಟ್ಟಿ ಸ್ವಾಮೀಜಿ, ಜೋಶಿಯವರು ಲಿಂಗಾಯತ ಮುಖಂಡರು ಮತ್ತು ಸಮುದಾಯಕ್ಕೆ ಮಾಡಿದ ದ್ರೋಹವನ್ನು ತಮ್ಮ ಮುಖ್ಯ ಚುನಾವಣಾ ಪ್ಲಾನ್‌ ಆಗಿ ಮಾಡಿಕೊಂಡಿದ್ದಾರೆ.

ಧಾರವಾಡದ ಪ್ರಮುಖ ಸಮಸ್ಯೆಗಳೆಂದರೆ ಮೂಲಭೂತ ಸೌಕರ್ಯಗಳ ಕೊರತೆ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ, ಕಳಪೆ ನಗರ ಮೂಲಸೌಕರ್ಯ, ಕಳಪೆ ಕೈಗಾರಿಕೀಕರಣದಿಂದ ನಿರುದ್ಯೋಗ ಮತ್ತು ಇನ್ನೂ ಅನೇಕ ಸಮಸ್ಯೆಗಳಿವೆ. ಆದರೆ ಕಳಸಾ-ಬಂಡೂರಿ ಹೊಳೆಗಳನ್ನು ಮಲಪ್ರಭಾ ನದಿಗೆ ಜೋಡಿಸುವ ಯೋಜನೆ ಜಾರಿಯಾಗದಿರುವುದು ಅದರಲ್ಲಿ ಪ್ರಮುಖವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಯೋಜನೆ ಕಾರ್ಯಗತಗೊಳಿಸದ ಕಾರಣಕ್ಕೆ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲೂ ಜೋಶಿ ಮೋದಿ ಸಂಪುಟದಲ್ಲಿದ್ದರೂ ಕೇಂದ್ರ ಸರ್ಕಾರದ ಅನುಮತಿ ಪಡೆಯದಿರುವುದು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿ ಬೇಸಿಗೆಯಲ್ಲಿ ಇಲ್ಲಿನ ಹಳ್ಳಿಗಳು ಮತ್ತು ಪಟ್ಟಣಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಸಹಜವಾಗಿಯೇ ಈ ಸಮಸ್ಯೆಯನ್ನು ಪರಿಹರಿಸಲು ಜಲ ಜೀವನ್ ಮಿಷನ್ ಜಾರಿಗೊಳಿಸಲಾಗುತ್ತಿದೆ, ಆದರೆ ಮಲಪ್ರಭಾ ಅಣೆಕಟ್ಟಿನಲ್ಲಿ ಸಂಗ್ರಹಣೆಯನ್ನು ಹೆಚ್ಚಿಸಲು ನದಿ ಜೋಡಣೆ ಯೋಜನೆಯನ್ನು ಕಾರ್ಯಗತಗೊಳಿಸದ ಹೊರತು ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ ಮೇ 7 ರಂದು ಮತದಾರರು ಯಾರನ್ನೂ ಆಯ್ಕೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Latest Indian news

Popular Stories