ನೇಹಾ ಹಿರೇಮಠ ನಿವಾಸಕ್ಕೆ ಸಚಿವ HK Patil ಭೇಟಿ, ದೂರವಾಣಿ ಮೂಲಕ ತಂದೆ ನಿರಂಜನ್ ಹಿರೇಮಠಗೆ ಸಿಎಂ ಸಾಂತ್ವನ | “ತಪ್ಪಾಗಿ ಹೇಳಿಕೆ ನೀಡಿದ್ದರೆ ಕ್ಷಮಿಸಿದ ಎಂದ ನೇಹಾ ತಂದೆ”

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್​ ಸದಸ್ಯ ನಿರಂಜನ ಹಿರೇಮಠ್ ಪುತ್ರಿ, ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಭಾರೀ ಸುದ್ದಿ ಮಾಡಿ ವಿರೋಧ ಪಕ್ಷಗಳ ಟೀಕೆ, ಒತ್ತಡದ ನಡುವೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.

ಚುನಾವಣಾ ಪ್ರಚಾರದ ಒತ್ತಡದ ಮಧ್ಯೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಹಾ ತಂದೆ ನಿರಂಜನ್​ ಹಿರೇಮಠ ಅವರೊಂದಿಗೆ ಇಂದು ದೂರವಾಣಿ ಮೂಲಕ ಮಾತನಾಡಿ, ವೆರಿ ಸಾರಿ, ನಾವು ನಿಮ್ಮೊಂದಿಗಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಹತ್ಯೆ ಪ್ರಕರಣವನ್ನು ತಮ್ಮದೇ ಪಕ್ಷದ ಸರ್ಕಾರವಿದ್ದರೂ ಸರಿಯಾಗಿ ಮುಂದುವರಿಸಿಕೊಂಡು ಹೋಗುತ್ತಿಲ್ಲ ಎಂದು ನಿರಂಜನ್ ಹಿರೇಮಠ್ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರೇಮಠ ಮನೆಗೆ ಸಿಎಂ ಮತ್ತು ಡಿಸಿಎಂ ಭೇಟಿ ನೀಡದೆ ಇದ್ದದ್ದು ಕೂಡ ಹಲವರ ಟೀಕೆಗೆ ಗುರಿಯಾಗಿತ್ತು.

ನಿರಂಜನ ಹಿರೇಮಠ ಅವರ ನಿವಾಸಕ್ಕೆ ಇಂದು ಸಚಿವ ಹೆಚ್​.ಕೆ ಪಾಟೀಲ್ ಭೇಟಿ ನೀಡಿ, ಸಾಂತ್ವನ ಹೇಳಿದರು. ಈ ವೇಳೆ ಹೆಚ್​​.ಕೆ.ಪಾಟೀಲ್​ ಅವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿದರು. ಆಗ ಸಿಎಂ ಸಿದ್ದರಾಮಯ್ಯ, ನೇಹಾ ತಂದೆ ನಿರಂಜನ ಹಿರೇಮಠ ಜೊತೆ ಮಾತನಾಡಿ, ನಾವು ನಿಮ್ಮ ಜೊತೆ ಇರುತ್ತೇವೆ, ವೆರಿ ಸಾರಿ ಎಂದರು. ಪ್ರಕರಣವನ್ನು ಸಿಐಡಿಗೆ ನೀಡಿದ್ದಕ್ಕೆ ನಿಮಗೆ ಧನ್ಯವಾದ ಎಂದು ನಿರಂಜನ ಹಿರೇಮಠ ಸಿಎಂಗೆ ಹೇಳಿದರು.

ಪ್ರಕರಣ ಸಂಬಂಧ ಸರ್ಕಾರ ತಕ್ಷಣ ಸ್ಪಂದಿಸಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ನಿರ್ಣಾಯಕ್ಕೆ ಧನ್ಯವಾದ ಹೇಳುತ್ತೇನೆ. ವಿಶೇಷ ನ್ಯಾಯಾಲಯಕ್ಕೆ ನೇಹಾ ಹಿರೇಮಠ ಅಂತ ಹೆಸರಿಡಬೇಕು, ಕಾಯ್ದೆಗೂ ಅವರ ಹೆಸರಿಡಿ. ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದರು.

ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ: ಮಾಹಿತಿ ಕೊರತೆಯಿಂದ ಸರ್ಕಾರದ ವಿರುದ್ಧ ಹೇಳಿಕೆ ಕೊಟ್ಟಿದ್ದೇವೆ. ಕಾನೂನಿನ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬೆನ್ನ ಹಿಂದೆ ಸರ್ಕಾರ ಕೆಲಸ ಮಾಡಿದೆ. ಸಿಎಂ ಸಾಂತ್ವನ ಹೇಳಲು ಬರುವುದಾಗಿ ಹೇಳಿದ್ದಾರೆ. ನಾನು ತಪ್ಪಾಗಿ ಮಾತನಾಡಿದ್ದರೆ ಕ್ಷಮಿಸಿ. ಪೊಲೀಸ್ ಆಯುಕ್ತರ ಬಗ್ಗೆ ದುಃಖದಲ್ಲಿ ತಪ್ಪಾಗಿ ಮಾತನಾಡಿದ್ದೇನೆ. ನನ್ನನ್ನು ಎಲ್ಲರೂ ಕ್ಷಮಿಸಿ. ಸ್ಥಳೀಯ ಶಾಸಕರು, ಜಿಲ್ಲಾಧ್ಯಕ್ಷರು ಎಲ್ಲ ಮುಖಂಡರು ನಮ್ಮ ಪರ ನಿಂತಿದ್ದಾರೆ ಎಂದು ನಿರಂಜನ ಹಿರೇಮಠ ಹೇಳಿದರು.

ಈಗ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ. ಅವರು ಹೇಗೆ ತನಿಖೆ ಮಾಡುತ್ತಾರೆ ಮೊದಲು ಮಾಡಲಿ. ಪೊಲೀಸ್ ಇಲಾಖೆ ಸರಿಯಾಗಿ ತನಿಖೆ ಮಾಡುತ್ತಿಲ್ಲ ಅಂತ ಆರೋಪ ಮಾಡಿದ್ದೆ. ನಿಷ್ಪಕ್ಷವಾಗಿ ತನಿಖೆ ನಡೆದಿರುವುದು ನನಗೆ ಗೊತ್ತಾಗಿದೆ. ಮಾಹಿತಿ ಕೊರತೆಯಿಂದ ಮಾತನಾಡಿದ್ದೇನೆ. ಪೊಲೀಸ್ ಇಲಾಖೆ ಬಳಿಯೂ ಕ್ಷಮೆ ಕೇಳುತ್ತೇನೆ. ಆತಂಕದಲ್ಲಿ ನಾನು ಕೆಲ ಹೇಳಿಕೆ ನೀಡಿದೆ. ಕಾಣದ ಕೈ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಹೇಳಿದರು.

Latest Indian news

Popular Stories