ಜನರ ಹಿತದೃಷ್ಟಿಯಿಂದ ವೈಜ್ಞಾನಿಕ ಮಾರ್ಗಸೂಚಿ ಜಾರಿಗೆ ಒತ್ತಾಯ

ಪೊನ್ನಂಪೇಟೆ, ಮೇ.10: ಜಿಲ್ಲಾಡಳಿತ ಇದೀಗ ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಮಾರ್ಗಸೂಚಿಗಳಿಂದ ಜಿಲ್ಲೆಗೆ ಅಪಾಯ ಸಂಭವಿಸುವ ಸಾಧ್ಯತೆಗಳು ಹೆಚ್ಚಿದೆ. ಆದ್ದರಿಂದ ಮಾರ್ಗಸೂಚಿಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸಿ ಜನರ ಹಿತದೃಷ್ಟಿಯಿಂದ ವೈಜ್ಞಾನಿಕವಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಕೊಡಗು ಜಿಲ್ಲಾ ಪಂಚಾಯತ್ ಸಾಮಾಜಿಕ ಮತ್ತು ನ್ಯಾಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಮೂಕೊಂಡ ವಿಜು ಸುಬ್ರಮಣಿ ಅವರು ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತವು ಕೊಡಗಿನಲ್ಲಿ ಕೊರೋನಾ ಕಾಯಿಲೆಯ ಸೋಂಕಿತರ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ವಾರದಲ್ಲಿ ಸೋಮವಾರ ಮತ್ತು ಶುಕ್ರವಾರದಂದು ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿ ತೆಗೆಯಲು ಅವಕಾಶ ಕಲ್ಪಿಸಿದೆ. ಇದರಿಂದ ಈ ಎರಡು ದಿನದ ಈ ವೇಳೆಯಲ್ಲಿ ಅಪಾರ ಪ್ರಮಾಣದ ಜನರು ಅಂಗಡಿಗಳಿಗೆ ಭೇಟಿ ನೀಡುವುದರಿಂದ ಜನ ದಟ್ಟಣೆ ಹೆಚ್ಚಾಗಿ ಸೋಂಕು ಸ್ಪೋಟಗೊಂಡು ಕೊರೋನಾ ಉಲ್ಬಣಕ್ಕೆ ಕಾರಣವಾಗಿ ಮುಂದಿನ ದಿನಗಳಲ್ಲಿ ಭಾರಿ ಅಪಾಯ ಸಂಭವಿಸಬಹುದು. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ಶುಕ್ರವಾರ ಮತ್ತು ಸೋಮವಾರದಂದು ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಾಗಿ ಜನ ಸೇರಿದ್ದರು. ಒಂದು ವೇಳೆ ಸೋಂಕು ಹರಡಿದ್ದರೆ ಈ ಎರಡು ದಿನಗಳಲ್ಲಿ ಕಾಡ್ಗಿಚ್ಚಿನಂತೆ ಹರಡುವುದರಲ್ಲಿ ಸಂಶಯವಿಲ್ಲ. ಇದಕ್ಕೆ ಜಿಲ್ಲಾಡಳಿತ ಜಾರಿಗೊಳಿಸಿದ ಅವೈಜ್ಞಾನಿಕವಾದ ಮಾರ್ಗಸೂಚಿಗಳೇ ಕಾರಣವಾಗಿದೆ ಎಂದು ಆರೋಪಿಸಿರುವ ವಿಜು ಸುಬ್ರಮಣಿ ಅವರು, ಜನಸಾಮಾನ್ಯರು ಇದೀಗ ಪಡಿತರ ಆಹಾರಕ್ಕಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಆದ್ದರಿಂದ ಪಡಿತರ ಆಹಾರಗಳನ್ನು ಸಂಬಂಧಿಸಿದ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯಾಗಬೇಕು. ಇದಕ್ಕೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊಡಗಿನಾದ್ಯಂತ ವ್ಯಾಪಕಗೊಳ್ಳುತ್ತಿರುವ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಜಿಲ್ಲಾಡಳಿತ ಕೂಡಲೇ ತುರ್ತು ಸಭೆಯನ್ನು ಕರೆದು ತಮ್ಮ ಈ ಹಿಂದಿನ ಆದೇಶದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಿ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಅಂಗಡಿಗಳಿಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಆಯಕಟ್ಟಿನಲ್ಲಿ ಪೋಲಿಸರನ್ನು ಜನದಟ್ಟಣೆಯನ್ನು ನಿಯಂತ್ರಿಸಬೇಕೆಂದು ಹೇಳಿಕೆಯಲ್ಲಿ ತಿಳಿಸಿರುವ ವಿಜು ಸುಬ್ರಮಣಿ ಅವರು, ಮಧ್ಯಾಹ್ನದವರೆಗೂ ಬ್ಯಾಂಕುಗಳು ಕಾರ್ಯನಿರ್ವಹಿಸುವುದರಿಂದ ಅಲ್ಲಿನ ಸೇವೆ ಪಡೆಯಲು ಕೂಡ ಜನಗಳಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಜನರ ಹಿತದೃಷ್ಟಿಯಿಂದ ಪರಿಷ್ಕರಿಸುವುದು ಅಗತ್ಯವಾಗಿದೆ. ಹಾಲಿ ಮಾರ್ಗಸೂಚಿಗಳಿಗೆ ಕೆಲ ಮಾರ್ಪಾಡು ತರುವುದರ ಮೂಲಕ ಜನಸಾಮಾನ್ಯರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಾಗಿದೆ. ಜೊತೆಗೆ ಆದಷ್ಟು ಶೀಘ್ರವಾಗಿ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಇನ್ನೂ ಕೋವಿಡ್ ಲಸಿಕೆ ದೊರಕದ ಹಿರಿಯ ನಾಗರಿಕರಿಗೆ ಕೋವಿಡ್ ಕುರಿತಾದ ಭಯದ ವಾತಾವರಣ ಹೋಗಲಾಡಿಸಲು ಅದರ ಬಗೆಗಿನ ಸಮಗ್ರ ಮಾಹಿತಿಯನ್ನು ನೀಡಿ ಲಸಿಕೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸುವ ವ್ಯವಸ್ಥೆಯನ್ನು ಆರಂಭಿಸಬೇಕು ಎಂದು ವಿಜು ಸುಬ್ರಮಣಿ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Latest Indian news

Popular Stories