ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ : ಸಾರ್ವಜನಿಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಸ್ಪಂದನೆ : ಜಿಲ್ಲಾಧಿಕಾರಿ ಭರವಸೆ

ಮಡಿಕೇರಿ ಮಾ.20 : ಜಿಲ್ಲೆಯ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.


ಸೋಮವಾಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಲ್ಲಿ ‘ಜಿಲ್ಲಾಧಿಕಾರಿಯವರ ನಡಿಗೆ ಹಳ್ಳಿಯ ಕಡೆಗೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಕೊಡ್ಲಿಪೇಟೆಯ ಭದ್ರಮ್ಮ ಮಹಾಂತಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯ ಆರಂಭದಲ್ಲಿ ಫಲಾನುಭವಿಗಳಿಗೆ ವಿವಿಧ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು.


ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಗೋವಿಂದ ರಾಜು ಅವರು ಮಾತನಾಡಿ ಸರ್ಕಾರದ ಆದೇಶದ ಮೂಲಕ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತದೆ ಎಂದರು.


ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷ ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹರು ಪಡೆಯಲು ಗ್ರಾಮ ಲೆಕ್ಕಿಗರಿಗೆ ಬ್ಯಾಂಕ್ ವಿವರಣೆ ನೀಡಬೇಕೆಂದು ಕೇಳಿಕೊಂಡರು.


ಗ್ರಾ.ಪಂ. ಸದಸ್ಯರಾದ ಮೋಕ್ಷಿತ್ ಅವರು ಮಾತನಾಡಿ, ಕೊಡ್ಲಿಪೇಟೆ ವ್ಯಾಪ್ತಿಯ ಹಲವು ಗ್ರಾಮದಲ್ಲಿ ಮಳೆ ಹಾನಿಯಿಂದಾಗಿ ಮನೆ ಕಳೆದುಕೊಂಡವರಿಗೆ ಇದುವರೆಗೂ ಮನೆ ಸಿಕ್ಕಿಲ್ಲ, ಈ ಬಗ್ಗೆ ಆದಷ್ಟು ಬೇಗ ಪರಿಶೀಲನೆ ಮಾಡಬೇಕು ಎಂದು ಕೋರಿದರು.

ಗ್ರಾ.ಪಂ.ಅಧ್ಯಕ್ಷರಾದ ಚಂದ್ರಶೇಖರ ಅವರು ಮಾತನಾಡಿ, ಹಲವು ವರ್ಷಗಳಿಂದ ನೀರಾವರಿ ಘಟಕಗಳು ಬಿಟ್ಟು ಹೋಗಿದ್ದು ಈ ಕುರಿತು ಇದುವರೆಗೂ ಯಾರು ಪರಿಶೀಲನೆ ಮಾಡಿಲ್ಲ ಎಂದರು.


ಕೊಡ್ಲಿಪೇಟೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ರಸ್ತೆ ದುರಸ್ತಿ ಆಗಬೇಕು ಎಂದು ಕೋರಿಕೊಂಡರು. 94ಸಿ ಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಮನೆ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.


ಪ್ರಮುಖರಾದ ಜನಾರ್ದನ್ ಅವರು ಮಾತನಾಡಿ, ಕೊಡ್ಲಿಪೇಟೆ ವ್ಯಾಪ್ತಿಯ 40 ಗ್ರಾಮದಲ್ಲಿ 20 ಸಾವಿರ ಜನಸಂಖ್ಯೆಯಿದೆ. ಆದರೆ ಇದುವರೆಗೂ ಸಾರ್ವಜನಿಕ ಬಸ್ ತಂಗುದಾಣ ಇಲ್ಲದಿರುವುದು ಬೇಸರದ ಸಂಗತಿ ಎಂದರು.


ಹಾಗೆಯೇ ಆಸ್ಪತ್ರೆಗಳಲ್ಲಿ ಒಬ್ಬರೇ ವೈದ್ಯರಿದ್ದು, ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ದೂರದ ಹಾಸನ ಜಿಲ್ಲೆಗೆ ತೆರಳುವುದು ಕಷ್ಟವಾಗಿದೆ. ಆದ್ದರಿಂದ ತಜ್ಞ ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.


ಕೊಡ್ಲಿಪೇಟೆಯಲ್ಲಿ ಸರ್ಕಾರಿ ಕಟ್ಟಡಗಳು ದುರಸ್ತಿಯಲ್ಲಿದ್ದು, ಹೊರಗಿನಿಂದ ಬಂದ ಸರ್ಕಾರಿ ಅಧಿಕಾರಿಗಳಿಗೆ ತಂಗಲು ಸೂಕ್ತ ವ್ಯವಸ್ಥೆ ಇಲ್ಲ. ಆದ್ದರಿಂದ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕು ಎಂದು ಅವರು ಸಲಹೆ ಮಾಡಿದರು.


ಕೊಡ್ಲಿಪೇಟೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯವಿದ್ದು, ವಿದ್ಯಾರ್ಥಿಗಳಿಗೆ ಕೊರತೆಯಾಗುತ್ತಿದೆ. ಆದ್ದರಿಂದ ಸರ್ಕಾರಿ ಜಾಗವನ್ನು ಗುರುತಿಸಿ ಮತ್ತೊಂದು ವಿದ್ಯಾರ್ಥಿ ನಿಲಯ ಆರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.


ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಸ್ಮಶಾನ ಜಾಗ ಇರುವುದಿಲ್ಲ. ಮೊದಲು ಇದ್ದ ಸ್ಮಶಾನಗಳಿಗೆ ಆರ್.ಟಿ.ಸಿ ಇರುವುದಿಲ. ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರಲ್ಲಿ ಕೋರಿದರು.


ದೇವರಾಜು ಕುಡ್ಲೂರು ಅವರು ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು.

ಮಳೆ ಬಿದ್ದು ಬೆಳೆ ಹಾನಿಯಾಗಿದ್ದು ಮನೆಗಳನ್ನು ಕಳೆದುಕೊಂಡಿದ್ದೇವೆ. ಒಂದು ವರ್ಷ ಆದರೂ ಸಹ ಏನು ಪರಿಹಾರ ದೊರಕಿಲ್ಲ ಎಂದು ಅವಲತ್ತುಕೊಂಡರು.


ದೊಡ್ಡ ಮಳ್ತೆ ಶನಿವಾರಸಂತೆ ಹೋಬಳಿಯಲ್ಲಿ ಸ್ಮಶಾನ ವ್ಯವಸ್ಥೆ ಇಲ್ಲವಾಗಿದೆ ಎಂದರು. ಅಕ್ರಮ ಸಕ್ರಮ ಯೋಜನೆ ಕುರಿತು ಸಮಿತಿ ಸಭೆಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದರು.


ಬಸವಯ್ಯ ಅವರು ಅರಣ್ಯ ಹಕ್ಕು ಸಮಿತಿಯ ಕುರಿತು ಮಾತನಾಡಿ ಹಾಡಿಗಳಲ್ಲಿನ ಜಮೀನುಗಳನ್ನು ಇತರೆ ಜನಾಂಗದವರು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಆದಿವಾಸಿಗಳಿಗೆ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ ಎಂದರು.

ಪೋಡಿ ಮತ್ತು ದುರಸ್ತಿ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ತಾಲ್ಲೂಕು ಕಚೇರಿಗಳಲ್ಲಿ ಲಭ್ಯವಿಲ್ಲ.

ಇದರಿಂದ ಕರ್ನಾಟಕ ಭೂ ಸುಧಾರಣಾ ಕಾಯಿದೆಯನ್ನು ಸದುಪಯೂಗ ಪಡಿಸಿಕೊಳ್ಳಲು ಆಗುತ್ತಿಲ್ಲ, ತಾತ್ಕಾಲಿಕವಾದರು ಯಾವುದಾದರು ನೀತಿಯನ್ನು ತಂದು ಕೊಡ್ಲಿಪೇಟೆ ಹೋಬಳಿಯನ್ನು ಪೆÇೀಡಿ ಮುಕ್ತ ಹೋಬಳಿಯನ್ನಾಗಿ ಮಾಡಬೇಕು ಎಂದು ಕೋರಿದರು.


ಬೆಸೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಮದ್ಯ ಮಾರಾಟ ಅಂಗಡಿ ಇದ್ದು, ಅದೇ ರಸ್ತೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಇದೆ. ಮಕ್ಕಳು ಮದ್ಯ ಅಂಗಡಿ ದಾಟಿ ಹೋಗಬೇಕು. ಆದ್ದರಿಂದ ಮದ್ಯ ಅಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಕೇಳಿಕೊಂಡರು.


ರಾಜೇಶ್ ಆವರು ಮಾತನಾಡಿ ಯಾವುದೇ ಸಮಸ್ಯೆ ಎದುರಾದಾಗ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಎಲ್ಲಾ ಬೊರ್ ವೆಲ್ ಗಳು ಒಣಗಿವೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಗೋವಿಂದ ರಾಜು ಅವರು ಆದಷ್ಟು ಬೇಗ ಈ ಕುರಿತು ಸಮಿತಿ ಸಭೆ ಕರೆಯಲಾಗುವುದು, ಅಹವಾಲಿನ ಮನವಿ ಪತ್ರಗಳನ್ನು ಸಲ್ಲಿಸಿ, ಇದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾತನಾಡಿ ಪಹಣಿ ದಾಖಲೆಗಳ ತಿದ್ದುಪಡಿ, ಗ್ರಾಮದ ಪೌತಿ ಖಾತೆಗಳ ಕ್ರಮಗೊಳಿಸುವ ವಿಷಯಗಳು.

ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ವಿಷಯಗಳು, ಆಹಾರ ಪಡಿತರ ಚೀಟಿಗೆ ಸಂಬಂಧಿಸಿದ ವಿಷಯಗಳು, ಪೆÇೀಡಿ/ ಅಳತೆ ವಿಚಾರಕ್ಕೆ ಸಂಬಂಧಿಸಿದ ವಿಷಯಗಳು.

ಸ್ಮಶಾನ ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ ವಿಷಯಗಳು, ಸರ್ಕಾರಿ ಜಮೀನಿನ ಒತ್ತುವರಿ ವಿಚಾರಗಳು, ಅತಿವೃಷ್ಟಿ ಪರಿಹಾರ ವಿಚಾರಗಳ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು. ಫೋಟೋ :: ಡಿಸಿ ಮೀಟಿಂಗ್

Latest Indian news

Popular Stories