ನೇಪಾಲದ ಎದುರು ಭಾರಿ ಜಯ: ಬಾಬರ್-ಇಫ್ತಿಕಾರ್ ಶತಕ

ಮುಲ್ತಾನ್‌ : ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ಥಾನ ತಂಡ ನೇಪಾಲದ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿ ಭರ್ಜರಿ ಮೊತ್ತವನ್ನು ನೇಪಾಲ ತಂಡದ ಮುಂದಿಟ್ಟಿತು. ನೇಪಾಲ ಪಾಕ್ ಬಿಗಿದಾಳಿಗೆ ಸಿಲುಕಿ 23.4 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟಾಯಿತು. ಪಾಕಿಸ್ಥಾನ 238 ರನ್ ಗಳ ಭಾರಿ ಜಯ ಸಾಧಿಸಿತು. ಶಾದಾಬ್ ಖಾನ್ 4 ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.

ನೇಪಾಲ ಪರ ಆರಿಫ್ ಶೇಖ್ 26 ಮತ್ತು ಸೋಂಪಾಲ್ ಕಾಮಿ 28 ರನ್ ಹೊರತು ಪಡಿಸಿ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.

ಪಾಕಿಸ್ಥಾನ 25 ರನ್ ಆಗುವಷ್ಟರಲ್ಲಿ ಮೊದಲ 2 ವಿಕೆಟ್ ಕಳೆದುಕೊಂಡಿತು.ಫಖರ್ ಜಮಾನ್ 14, ಇಮಾಮ್-ಉಲ್-ಹಕ್ 5 ರನ್ ಗಳಿಸಿದ್ದ ವೇಳೆ ರನೌಟಾದರು.ಆ ಬಳಿಕ ಬಂದ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಂ ಅಬ್ಬರಿಸಿದರು. ತಾಳ್ಮೆಯ ಆಟವಾಡಿ ಶತಕ ಪೂರ್ತಿಗೊಳಿಸಿದರು.151(131 ಎಸೆತ) ರನ್ ಗಳಿಸಿದ್ದ ವೇಳೆ ಕೊನೆಯಲ್ಲಿ ಔಟಾದರು. ಬಾಬರ್ ರೊಂದಿಗೆ ಉತ್ತಮ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ವಿಲಕ್ಷಣ ರನೌಟ್ (ದೀಪೇಂದ್ರ ಸಿಂಗ್) ಆದರು. ಅವರು 44 ರನ್ ಗಳಿಸಿದ್ದರು. ಆಬಳಿಕ ಬಾಬರ್ ಅವರಿಗೆ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ ಔಟಾಗದೆ 109 ರನ್ ಗಳಿಸಿದರು. ಸ್ಪೋಟಕ ಶತಕ ಸಿಡಿಸಿದ ಅವರು ಒಟ್ಟು 71 ಎಸೆತಗಳಲ್ಲಿ 109 ರನ್ ಗಳಿಸಿದರು.

ಸೆ.02(ಶನಿವಾರ) ರಂದು ಭಾರತದ ವಿರುದ್ಧ ಪಾಕಿಸ್ಥಾನ ಏಷ್ಯಾ ಕಪ್ ನ ಎ ಗುಂಪಿನ 3 ನೇ ಪಂದ್ಯವನ್ನು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,ಪಲ್ಲೆಕೆಲೆಯಲ್ಲಿ ಆಡಲಿದೆ.

Latest Indian news

Popular Stories