
ಅನಿವಾಸಿ ಭಾರತೀಯರಿಗೆ ‘ಎಸ್.ಐ.ಆರ್’ ತರಬೇತಿ ಕಾರ್ಯಾಗಾರ
ಉಡುಪಿ/ಯುಎಇ: ಅನಿವಾಸಿ ಭಾರತೀಯ ಮತದಾರರ ಹೆಸರು ನೋಂದಾವಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾಹೇಬಾನ್ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಅನಿವಾಸಿ ಭಾರತೀಯರಿಗಾಗಿ ವಿಶೇಷ ತೀವ್ರ ಪರಿಷ್ಕರಣೆ (SIR – Special Intensive Revision) ತರಬೇತಿ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಉಡುಪಿಯ ವಕೀಲರಾದ ಯಾಸೀನ್ ಕೋಡಿಬೆಂಗ್ರೆ ಅವರು ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಎಸ್.ಐ.ಆರ್ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಉಳಿಸಿಕೊಳ್ಳಲು ಮತ್ತು ಹೊಸದಾಗಿ ಸೇರ್ಪಡೆಗೊಳಿಸಲು ಇರುವ ನಿಯಮಗಳನ್ನು ವಿವರಿಸಲಾಯಿತು. ಎಸ್.ಐ.ಆರ್ ಅರ್ಜಿ ನಮೂನೆಗಳನ್ನು (Application Forms) ಯಾವುದೇ ತಪ್ಪುಗಳಿಲ್ಲದೆ ಭರ್ತಿ ಮಾಡುವ ಪ್ರಾಯೋಗಿಕ ವಿಧಾನವನ್ನು (Practical Demonstration) ಅನಿವಾಸಿ ಭಾರತೀಯರಿಗೆ ವಿವರವಾಗಿ ಈ ಸಂದರ್ಭದಲ್ಲಿ ತಿಳಿಸಿಕೊಡಲಾಯಿತು.
ದಾಖಲಾತಿಗಳ ವಿವರ: ಲಿಂಕೇಜ್ ಮತ್ತು ಮ್ಯಾಪಿಂಗ್ ಪ್ರಕ್ರಿಯೆಗೆ ಅಗತ್ಯವಿರುವ ಹಳೆಯ ದಾಖಲೆಗಳು (ಉದಾಹರಣೆಗೆ 2002ರ ಮತದಾರರ ಪಟ್ಟಿ, ಹಳೆಯ ಪಾಸ್ಪೋರ್ಟ್, ಎಸ್ಎಸ್ಎಲ್ಸಿ ಸರ್ಟಿಫಿಕೇಟ್ ಇತ್ಯಾದಿ) ಮತ್ತು ಪ್ರಸ್ತುತ ಬೇಕಾಗುವ ದಾಖಲಾತಿಗಳ ಕುರಿತು ಮಾಹಿತಿ ನೀಡಲಾಯಿತು.
ಪ್ರಸ್ತುತ ವಿದೇಶದಲ್ಲಿರುವ ಅನಿವಾಸಿ ಭಾರತೀಯರು ಭಾರತಕ್ಕೆ ಭೌತಿಕವಾಗಿ ಬಾರದೆಯೇ ಆನ್ಲೈನ್ ಮೂಲಕ ಅಥವಾ ಸ್ಥಳೀಯ ಬಿ.ಎಲ್.ಒ (BLO) ಗಳ ಮೂಲಕ ಅನುಸರಿಸಬೇಕಾದ ಸುಲಭ ವಿಧಾನಗಳ ಬಗ್ಗೆ ಸ್ಪಷ್ಟನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಇಕ್ಬಾಲ್ ಮನ್ನಾ ಅವರು ಉಪಸ್ಥಿತರಿದ್ದರು. ಸಮಾವೇಶದ ಸಮಗ್ರ ನಿರೂಪಣೆಯನ್ನು ಪರ್ವಿನ್ ಅಸ್ಸಾದಿ ಅವರು ಅಚ್ಚುಕಟ್ಟಾಗಿ ನಡೆಸಿ, ಕೊನೆಯಲ್ಲಿ ವಂದನಾರ್ಪಣೆಗೈದರು.




