
Uttara Kannada
ಚಿರತೆ ದಾಳಿ : ಮೂರು ಎಮ್ಮೆ ಕರು ಬಲಿ
ಕಾರವಾರ: ತಾಲೂಕಿನ ಕದ್ರಾ ಪ್ರದೇಶದ ಬೋರೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಚಿರತೆ ದಾಳಿ ಮಾಡಿದ್ದು, ಮೂರು ಎಮ್ಮೆ ಕರುಗಳನ್ನು ತಿಂದು ಗಾಯಗೊಳಿಸಿದೆ. ಇದರಿಂದ ಬೋರೆ ಗ್ರಾಮಸ್ಥರು ಭಯ ಗೊಂಡಿದ್ದಾರೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಚಿರತೆ ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ಮೂರು ಎಮ್ಮೆ ಕರುಗಳನ್ನು ಗ ಕೊಂದು, ಭಾಗಶಃ ತಿಂದು ಹಾಕಿದೆ. ಶುಕ್ರವಾರ ಬೆಳಿಗ್ಗೆ, ಕೊಟ್ಟಿಗೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವು . ಎಮ್ಮೆ ಕರುಗಳ ಛಿದ್ರಗೊಂಡ ದೇಹ ಕಂಡು ಮಾಲೀಕರು ಗಾಬರಿಗೊಂಡರು. ಒಂದು ಕರುವಿನ ಹೊಟ್ಟೆ ಭಾಗ ಸಂಪೂರ್ಣವಾಗಿ ಹರಿದು ಹೋಗಿರುವುದು ಕಂಡುಬಂದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಂಪೂರ್ಣ ಪರಿಶೀಲನೆಯ ನಂತರ ಘಟನೆಯನ್ನು ಚಿರತೆ ದಾಳಿ ಎಂದು ದೃಢಪಡಿಸಿದರು. ಈ ಪ್ರದೇಶದಲ್ಲಿ ಈ ಹಿಂದೆಯೂ ಚಿರತೆಗಳು ಕಾಣಿಸಿಕೊಂಡಿದ್ದವು. ಮಾನವ ವಸತಿ ಪ್ರದೇಶಕ್ಕೆ ಚಿರತೆಗಳ ಚಲನವಲನ ಹೆಚ್ಚುತ್ತಿರುವ ಕಳವಳಕಾರಿ ಸಂಗತಿಯಾಗಿದ್ದು, ಅರಣ್ಯ ಇಲಾಖೆ ಗಮನ ಹರಿಸುವ ಅಗತ್ಯವಿದೆ.




