
ಮಗುವಿನ ಮೇಲೆ ಬೀದಿ ನಾಯಿ ದಾಳಿ
ಕಾರವಾರ : ಯಲ್ಲಾಪುರ ಪಟ್ಟಣದಲ್ಲಿ ಎರಡು ವರ್ಷದ ಪುಟ್ಟ ಮಗುವಿನ ಮೇಲೆ ಬೀದಿ ನಾಯಿ ತೀವ್ರವಾಗಿ ಕಚ್ಚಿ ಎಳೆದಾಡಿದ ಘಟನೆ ನಡೆದಿದೆ. ಮನೆ ಅಂಗಳದಲ್ಲೇ ಆಟವಾಡುತ್ತಿದ್ದ ಮಗುವಿನ ಮುಖಕ್ಕೆ ನಾಯಿ ಕಚ್ಚಿದ್ದು, ಗಂಭೀರ ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಯಲ್ಲಾಪುರದ ಕಾಳಮ್ಮ ನಗರ ಹಾಗೂ ಆಶ್ರಯ ಕಾಲೋನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮುನ್ನಾ ಅವರ ಎರಡು ವರ್ಷದ ಪುತ್ರಿ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿದೆ.
ಮಗು ಅಳುತ್ತಿರುವುದನ್ನು ಗಮನಿಸಿದ ಪಾಲಕರು ಹೊರಗೆ ಬಂದು ನೋಡಿದಾಗ, ಬಾಲಕಿಯ ಮುಖದ ಮೇಲೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ.
ತಕ್ಷಣ ಬಾಲಕಿಯನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಮುಖದ ಮೇಲಿನ ಗಾಯದ ತೀವ್ರತೆಯನ್ನು ಪರಿಗಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ . ಬಾಲಕಿ ತಂದೆ ಮುನ್ನಾ ಗ್ಯಾರೇಜ್ ನಡೆಸುತ್ತಿದ್ದಾರೆ.
ಕಾಳಮ್ಮ ನಗರದ ಆಶ್ರಯ ಕಾಲೂನಿಯಲ್ಲಿ ಈಗಾಗಲೇ ನಾಲ್ವರು ಸೇರಿದಂತೆ ಹಲವು ಮಂದಿಗೆ ಬೀದಿ ನಾಯಿಗಳು ಕಚ್ಚಿವೆ. ಮನೆ ಅಂಗಳ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳ ಗುಂಪುಗಳು ಓಡಾಡುತ್ತಿರುವುದರಿಂದ ಮಕ್ಕಳು ಹಾಗೂ ವಯೋವೃದ್ಧರು ಹೊರಗೆ ಓಡಾಡಲು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪುಟ್ಟ ಮಗುವಿನ ಮೇಲಿನ ದಾಳಿ ಘಟನೆ ಬಳಿಕವಾದರೂ ಪಟ್ಟಣ ಪಂಚಾಯತ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.




