ಸಂಸದರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ: ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಮುಖಂಡ ಡಬ್ಬಿ ಅಹ್ವಾನ

ವಿಜಯಪುರ : ನಮ್ಮ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಅಭಿವೃದ್ಧಿ ಕಾರ್ಯಗಳು, ಕೊಡುಗೆಗಳನ್ನು ಪದೇಪದೇ ಪ್ರಶ್ನಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯವರು ಹಾಗೂ ಕಾಂಗ್ರೆಸ್ ನಾಯಕರು ಕೇಳಲು ಸಿದ್ದರಿದ್ದರೆ ನಾವು ಹಾಗೂ ನಮ್ಮ ಅಭ್ಯರ್ಥಿ ಗಾಂಧಿ ಚೌಕಿನಲ್ಲಿ ಬಂದು ನಮ್ಮ ಬಿಜೆಪಿ ಸರ್ಕಾರದ ಹಾಗೂ ಸಂಸದರ ಅಭಿವೃದ್ಧಿ ಕಾರ್ಯಸಾಧನೆಗಳ ಬಗ್ಗೆ ಹೇಳಲು ಸಿದ್ದರಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕಾಂಗ್ರೆಸ್ಸಿನ ನಾಯಕರು ಬರುವುದಿದ್ದರೆ ಅಲ್ಲಿಗೆ ಬಂದು ಉತ್ತರ ಕೊಡಲಿ ಎಂದು ಬಿಜೆಪಿ ಓಬಿಸಿ ಮೊರ್ಚಾ ರಾಜ್ಯ ಉಪಾಧ್ಯಕ್ಷರಾದ ವಿವೇಕಾನಂದ ಡಬ್ಬಿ ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.

ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಏನು ಮಾಡಿದ್ದಾರೆಂದು ಕಾಂಗ್ರೆಸ್ಸಿಗರು ಪ್ರಶ್ನಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ 12ನೇ ಚುನಾವಣೆ ಎದುರಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 2,51,107 ರೈತರಿಗೆ ಕೇಂದ್ರದಿಂದ ವರ್ಷಕ್ಕೆ 6 ಸಾವಿರ ಹಣ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 2,10,484 ತಾಯಂದಿರಿಗೆ ಗ್ಯಾಸ್ ವಿತರಣೆ, ಪಿಎಂ ಅವಾಸ್ ಯೋಜನೆಯಡಿ ಜಿಲ್ಲೆಯ 27,724 ಜನರಿಗೆ ಮನೆಗಳನ್ನು, ಜಲಜೀವನ್ ಮೀಷನ್ ಯೋಜನೆಯಡಿ 2,99,991 ಮನೆಗಳಿಗೆ ನಳ ಸಂಪರ್ಕ, ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ 16,15,708 ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ ವಿತರಿಸುವ ಕೆಲಸ ಮಾಡಿಸಿದ್ದಾರೆ.

ಜೊತೆಗೆ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ 4,95,613 ಆಯುಷ್ಮಾನ್ ಕಾರ್ಡ್, ಪಿಎಂ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿವರೆಗೂ 2006 ಕಿ.ಮೀ ಗ್ರಾಮೀಣ ರಸ್ತೆ ನಿರ್ಮಾಣ, 47 ಜನೌಷಧಿ ಕೇಂದ್ರ, ಸ್ವಚ್ಚ ಭಾರತದಡಿ 2,11,153 ಮನೆಗಳಿಗೆ ಶೌಚಾಲಯಗಳ ನಿರ್ಮಾಣ, ಶ್ರಮಿಕ ವರ್ಗದ 3,24,337 ಶ್ರಮಿಕರಿಗೆ ಇ-ಶ್ರಮ ಕಾರ್ಡ್ ನೀಡಲಾಗಿದೆ. ಹೀಗೆ ಜಿಲ್ಲೆಯಲ್ಲಿ ಅಂದಾಜು 19 ಲಕ್ಷ ಮತದಾರರಲ್ಲಿ ಒಬ್ಬೊಬ್ಬರಿಗೆ ಎರಡ್ಮೂರು ಯೋಜನೆಗಳಂತೆ ಸರಿಸುಮಾರು 30 ಲಕ್ಷ ಜನರಿಗೆ ನಮ್ಮ ಯೋಜನೆಗಳು ತಲುಪಿವೆ. ಜಿಲ್ಲೆಯ ಅಭಿವೃದ್ಧಿಗೆ ಸಂಸದರು ಸುಮಾರು 1 ಲಕ್ಷ ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ ಎಂದರು.

ಇನ್ನು ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಅವರು 1999 ಹಾಗೂ 2013 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ 2004 ರಲ್ಲಿ ಮತ್ತೆ ಚುನಾವಣೆ ನಾಮಪತ್ರ ಸಲ್ಲಿಸಲು ಹೋದಾಗ ಅದೇ ನಾಗಠಾಣ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯರ್ತರು ಅಲಗೂರರಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದರು. ಅಲಗೂರರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂಬ ಕಾರಣಕ್ಕೆ 2018 ಹಾಗೂ 2023 ರಲ್ಲೂ ಪಕ್ಷ ಎಂಎಲ್ಎ ಟಿಕೇಟ್ ನೀಡಲಿಲ್ಲ, 2019 ರ ಎಂಪಿ ಟಿಕೇಟ್ ಸಹ ನೀಡಲಿಲ್ಲ. ಇದನ್ನು ಕಾಂಗ್ರೆಸ್ ಅಭ್ಯರ್ಥಿ ಮರೆತಿದ್ದಾರೆ ಎಂದು ವಿವೇಕಾನಂದ ಡಬ್ಬಿ ಆರೋಪಿಸಿದರು.
ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಮಾತನಾಡಿ, ವಿಜಯಪುರ ನಗರ ಮತಕ್ಷೇತ್ರದಲ್ಲಿ ಎರಡು ದಿನಗಳ ಕಾಲ ಬಿಜೆಪಿ ಪ್ರಚಾರಾರ್ಥ ಕಾರ್ಯವಾಗಿ ಉಸ್ತುವಾರಿಯಾಗಿ ನೇಮಕವಾಗಿದ್ದೇನೆ. ನಗರದ ಎರಡು ದಿನಗಳ ಪ್ರಚಾರದಲ್ಲಿ ಬಿಜೆಪಿ ಪರ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದ್ದು, ನಿಜಕ್ಕೂ ನಮ್ಮ ಅಭ್ಯರ್ಥಿ ಜಿಗಜಿಣಗಿ ಅವರು ಅತ್ಯಧಿಕ ಮತಗಳಿಂದ ಗೆದ್ದು ಬರುವ ವಿಶ್ವಾಸ ಮೂಡಿಸಿದೆ. ಸಂಸದ ರಮೇಶ ಜಿಗಜಿಣಗಿ, ಶಾಸಕ ಯತ್ನಾಳರು ಹಾಗೂ ನಮ್ಮ ಪಾಲಿಕೆ ಸದಸ್ಯರು ನಗರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಬದಲಾವಣೆಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ ಎಂದರು. ಬಿಜೆಪಿ ಸಾಧನೆಗಳನ್ನು ಕಂಡು ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. 70 ವರ್ಷದಲ್ಲಾಗದ ಅಭಿವೃದ್ಧಿ ಕೆಲಸಗಳನ್ನು ಪ್ರಧಾನಿ ಮೋದಿಯವರು ಹತ್ತು ವರ್ಷಗಳ ಮಾಡಿ ತೋರಿಸಿದ್ದಾರೆ. ನಮ್ಮ ಅಭ್ಯರ್ಥಿ ಜಿಗಜಿಣಗಿ ಅವರು 3 ಲಕ್ಷದವರೆಗೂ ಅಧಿಕ ಅಂತರದಿಂದ ಗೆಲ್ಲುತ್ತಾರೆಂಬ ವಿಶ್ವಾಸವ್ಯಕ್ತಪಡಿಸಿದರು.

ಈ ವೇಳೆ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬೂ ಮಾಶ್ಯಾಳ, ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಹಾಗೂ ಹಲವರು ಉಪಸ್ಥಿತರಿದ್ದರು.

Latest Indian news

Popular Stories