ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಲೆಕ್ಕ ಪತ್ರ ತಪಾಸಣೆ | ಬೈಕ್ ರ‍್ಯಾಲಿ ಮೂಲಕ ವಿಶೇಷಚೇತನರಿಂದ ಮತದಾನ ಜಾಗೃತಿ

ವಿಜಯಪುರ : ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಲೆಕ್ಕಪತ್ರವನ್ನು ಜನಪ್ರತಿನಿಧಿಗಳ ಕಾಯ್ದೆ 1951 ರ ಕಲಂ 77 (1)ರ ಪ್ರಕಾರ ವೆಚ್ಚ ವೀಕ್ಷಕರು ತಪಾಸಣೆ ನಡೆಸಲಿದ್ದಾರೆ.


ಮೊದಲನೇ ತಪಾಸಣೆ ಏಪ್ರೀಲ್ 26, ಎರಡನೇ ತಪಾಸಣೆ ಮೇ 1 ಹಾಗೂ ಮೂರನೇ ತಪಾಸಣೆ ಮೇ 5 ರಂದು ಬೆಳಿಗ್ಗೆ 11 ಗಂಟೆಯಿಂದ ಮಾಡಲಾಗುತ್ತಿದೆ. ಈ ದಿನಗಳಂದು ಅಭ್ಯರ್ಥಿಗಳು ತಮ್ಮ ಚುನಾವಣಾ ಏಜೆಂಟರುಗಳ ಮೂಲಕ ಬಿಳಿ ಬಣ್ಣದ ದೈನಂದಿನ ಖರ್ಚು ವೆಚ್ಚಗಳ ಪುಸ್ತಕ ಭಾಗ-ಎ, ಗುಲಾಬಿ ಬಣ್ಣದ ನಗದು ಪುಸ್ತಕ ಭಾಗ-ಬಿ ಮತ್ತು ಹಳದಿ ಬಣ್ಣದ ಬ್ಯಾಂಕ್ ನಗದು ಪುಸ್ತಕ, ಭಾಗ-ಸಿ ಪುಸ್ತಕಗಳನ್ನು ಕಾಲೋಚಿತಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಅಭ್ಯರ್ಥಿಗಳ ಲೆಕ್ಕ ಪತ್ರಗಳ ತಪಾಸಣೆಗೆ ಅಭ್ಯರ್ಥಿಗಳು / ಚುನಾವಣಾ ಎಜೆಂಟರುಗಳು ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಕ್ ರ‍್ಯಾಲಿ ಮೂಲಕ ವಿಶೇಷಚೇತನರಿಂದ ಮತದಾನ ಜಾಗೃತಿ

ವಿಜಯಪುರ : ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಎಲ್ಲರೂ ಮತದಾನ ಮಾಡಬೇಕು ಎಂದು ಜಿ.ಪಂ ಸಿಇಓ ರಿಷಿ ಆನಂದ ಹೇಳಿದರು.


ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ಮಹಾನಗರ ಪಾಲಿಕೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವಿಜಯಪುರ ಸಹೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷಚೇತನರ ಇಂಧನ ಚಾಲಿತ ತ್ರಿಚಕ್ರವಾಹನಗಳ ಬೈಕ್ ರ‍್ಯಾಲಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ವಿಕಲಚೇತನರು ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ಪ್ರಥಮ ಆದ್ಯತೆಯ ಮೇರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.


ದೇಶದ ಅಭಿವೃದ್ಧಿಯಲ್ಲಿ ಮತದಾನ ಪ್ರಮುಖವಾದದ್ದು, ಆದ್ದರಿಂದ ಪ್ರತಿಯೊಬ್ಬರು ನೈತಿಕವಾಗಿ ಹಾಗೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ನೆರೆ-ಹೊರೆಯವರಿಗೂ ಸಹ ಮತದಾನ ಮಾಡಲು ಪ್ರೇರೇಪಿಸಲು ತಿಳಿಸಿದರು.
ಜಿಲ್ಲಾಸ್ಪತ್ರೆಯಿಂದ ಸುಮಾರು 100 ಇಂಧನ ಚಾಲಿತ ತ್ರಿಚಕ್ರ ವಾಹನ, ಮತದಾನ ಜಾಗೃತಿಯ ಸ್ತಬ್ಧಚಿತ್ರ ವಾಹನದೊಂದಿಗೆ 200 ಕ್ಕಿಂತ ಹೆಚ್ಚು ವಿಶೇಷ ಚೇತನರು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗುತ್ತ ನಗರದ ಶ್ರೀ ಛತ್ರಪತಿ ಶಿವಾಜಿ ಮಹಾಜರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಜಗಜ್ಯೋತಿ ಬಸವೇಶ್ವರ ವೃತ್ತ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳ ಮೂಲಕ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಬೈಕ್ ರ‍್ಯಾಲಿ ನಡೆಯಿತು.


ನಂತರ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿ ಸಾಕ್ಷಿ ಹಿರೇಮಠರವರು ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ರವರು ರಚಿಸಿದ ಮತದಾರರ ಜಾಗೃತಿ ಕುರಿತು ರಚಿಸಿದ ಗೀತೆಯನ್ನು ಹಾಡಿದರು. ಜಿಲ್ಲಾ ಸ್ವೀಪ್ ಸಮಿತಿಯ ಇನ್ನೋರ್ವ ರಾಯಭಾರಿ ಸಹನಾ ಕುಡಿಗನೂರ ಇವರು ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶಾದ ಉರ್ ರೆಹಮಾನ್ ಶರೀಫ, ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿ ಸಿ.ಆರ್.ಮುಂಡರಗಿ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಜಶೇಖರ್ ದೈವಾಡಿ, ಜಿಲ್ಲಾ ಮಕ್ಕಳ ಆರೋಗ್ಯಾಧಿಕಾರಿ ಡಾ.ಗುಂಡಬಾವಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕವಿತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಜೈಬೂನಿಸಾ ಬೀಳಗಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Latest Indian news

Popular Stories