Vijayapura | ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ನೀಡಲು ಆಗ್ರಹ

ವಿಜಯಪುರ : ನೇಹಾ ಹಿರೇಮಠ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ನೀಡಿ ಸಂತ್ರಸ್ಥ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಜಂಗಮ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.


ಜಂಗಮ ಸಮಾಜ ಮುಖಂಡ ಸಂಜೀವ ಹಿರೇಮಠ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಸಾವಳಗಿಮಠ ಮಾತನಾಡಿ, ನೇಹಾ ಹತ್ಯೆ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ದೊಡ್ಡ ಭಯ ಹುಟ್ಟಿಸಿದೆ. ಹಾಡು ಹಗಲೇ ಕಾಲೇಜಿನ ಆವರಣದಲ್ಲಿ 9 ಸಲ ಚಾಕುವಿನಿಂದ ಇರಿದು ಕ್ರೂರವಾಗಿ ಹತ್ಯೆ ಮಾಡಿರುವ ಆರೋಪಿ ಫಯಾಜ್‌ಗೆ ಊಗ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಫಯಾಜ್ ಮಾಡಿರುವ ಹೀನ ಕೃತ್ಯದಲ್ಲಿ ಆತನ ಇನ್ನೂ ನಾಲ್ಕು ಸಹಪಾಠಿಗಳ ಕೈವಾಡವೂ ಇರುವುದು ತಿಳಿದು ಬಂದಿದೆ. ಹಾಗಾಗಿ ಎಲ್ಲರನ್ನೂ ಬಂಧಿಸಿ ಸರಿಯಾಗಿ ವಿಚಾರಣೆ ನಡೆಸಬೇಕು. ಅಲ್ಲದೇ ಆರೋಪಿಗಳಿಗೆ ಜಾಮಿನು ಸಿಗದಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ವಿಚಾರಣೆ ನಡೆಸಿ 1 ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಿ ಗರಿಷ್ಠ ಮಟ್ಟದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಿರಳ ಪ್ರಕರಣಗಳಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸುಗ್ರಿವಾಜ್ಞೆ ಮೂಲಕ ಕಠೀಣ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಸಾದ ವಸ್ತ್ರದ, ಹಿಂದೂ ಮಹಾಸಭಾದಿಂದ ಪೂರ್ಣಿಮಾ ಬದ್ನೂರ, ಭುವನೇಶ್ವರಿ ಕೋರವಾರ, ಮಾಯಾ ಚೌಧರಿ ಮಾತನಾಡಿ, ಈ ಕೊಲೆಯಲ್ಲಿ ರಾಜಕಾರಣ ಮಾಡದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಿ ಅದರಂತೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಜಾರಿಗೆ ತರಬೇಕು ಒತ್ತಾಯಿಸಿದರು.

Latest Indian news

Popular Stories