ವಿದ್ಯಾರ್ಥಿ, ಯುವ ಸಮುದಾಯ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಚ್ಚರಿಕೆಯಿಂದ ಪ್ರಣಾಳಿಕೆ ನೀಡಿ: ಶ್ರೀನಾಥ ಪೂಜಾರಿ

ವಿಜಯಪುರ: ದೇಶದ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಎಲ್ಲ ಪಕ್ಷಗಳ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಚ್ಚರಿಕೆಯಿಂದ ಪ್ರಾಣಳಿಕೆ ನೀಡಬೇಕು ಎಂದು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಾಥ ಪೂಜಾರಿ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಯುವ ಸಮುದಾಯವನ್ನು ಲಘುವಾಗಿ ಪರಿಗಣಿಸಬಾರದು. ಚುನಾವಣೆಯ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವುದೇ ಪಕ್ಷ ಮೋಸ ಮಾಡಲು ಸಾಧ್ಯವಿಲ್ಲ. ಎಲ್ಲ ಪಕ್ಷಗಳು ಜನರ ಸಮಸ್ಯೆಗಳನ್ನು ಇಡೇರಿಸುವಲ್ಲಿ ವಿಫಲವಾಗಿವೆ. ಕಳೆದ 5 ವರ್ಷಗಳಿಂದ ಗಾಡ ನಿದ್ರೆಗೆ ಜಾರಿದ್ದ ರಾಜಕೀಯ ಪಕ್ಷಗಳು ಚುನಾವಣೆ ಬಂದಿದ್ದರಿಂದ ಎಚ್ಚರಗೊಂಡಿವೆ. ಪಕ್ಷಗಳಿಗೆ ಜನರ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ. ಕೇವಲ ಹಣಬಲ ಹಾಗೂ ಜಾತಿ-ಧರ್ಮದ ಆಧಾರದ ಮೇಲೆ ಚುನಾವಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.


ವಿದ್ಯಾರ್ಥಿ-ಯುವಜನರ ಸಮುದಾಯದ ಮೇಲೆ ಆಳವಾದ ಪರಿಣಾಮ ಬೀರುವ ಶಿಕ್ಷಣ ಹಾಗೂ ಉದ್ಯೋಗ ಅವಳಿ ಸಮಸ್ಯೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ವಿದ್ಯಾರ್ಥಿ-ಯುವಜನರ ಪ್ರಣಾಳಿಕೆ ಮುಂದಿಟ್ಟಿವೆ. ಈ ಅವಳಿ ಬೇಡಿಕೆಗಳನ್ನು ಪರಿಹರಿಸುವುದು ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.


ಭಾರತ ಕಲ್ಯಾಣ ರಾಜ್ಯವಾಗಬೇಕೆಂಬ ಆಶಯದ ಉಲ್ಲೇಖ ಸಂವಿಧಾನದಲ್ಲಿಯೇ ಇದೆ. ದೇಶದ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ಒದಗಿಸುವ ಹಾಗೂ ಉದ್ಯೋಗದ ವಿಚಾರದಲ್ಲಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಸಂವಿಧಾನದ ಪರಿಚ್ಛೇದ 45 ಮತ್ತು ಪರಿಚ್ಛೇದ 16 ರಲ್ಲಿ ಈ ಆಶಯ ಅಡಗಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್, ವಿದ್ಯಾರ್ಥಿ ಮುಖಂಡರಾದ ಗುರುಪ್ರಸಾದ್, ಸಾಹೇಬಿ, ವಿಜಯಲಕ್ಷ್ಮಿ, ಎಸ್.ಐ.ಓ ಮುಖಂಡರಾದ ಅಬ್ದುಲ್, ದಾನೀಶ ಉಪಸ್ಥಿತರಿದ್ದರು.

Latest Indian news

Popular Stories