ವಿಜಯಪುರ ಲೋಕಸಭಾ ಕ್ಷೇತ್ರ: 8 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

ವಿಜಯಪುರ: ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯವಾಗಿದ್ದು, ಒಟ್ಟಾರೆ 4 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದಾರೆ. ಅಂತಿಮ ಕಣದಲ್ಲಿ 8 ಅಭ್ಯರ್ಥಿಗಳು ಇದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಸಂಗಪ್ಪಾ ಹುಣಶಿಕಟ್ಟಿ, ಹಾಗೂ ಬಾಬುರಾಜೇಂದ್ರ ನಾಯಿಕ, ಭಾರತೀಯ ಜವಾನ್ ಕಿಸಾನ್ ಪಕ್ಷದ ಕುಲಪ್ಪಾ ಬಿ ಚವ್ಹಾಣ, ಬಿಎಸ್ಪಿ ಪಕ್ಷದ ಮಲ್ಲು ಹಾದಿಮನಿ ತಮ್ಮ ಉಮೇದುವಾರಿಕೆಯನ್ನು ಏ.22 (ಸೋಮವಾರ) ರಂದು ಹಿಂಪಡೆದಿದ್ದಾರೆ.

ಭಾರತೀಯ ಜನತಾ ಪಕ್ಷದ ರಮೇಶ ಜಿಗಜಿಣಗಿ, ಕಾಂಗ್ರೇಸ್ನ ರಾಜು ಆಲಗೂರ, ಕಾರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಗಣಪತಿ ಲಾಲಸಿಂಗ ರಾಠೋಡ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷದ ಜಿತೇಂದ್ರ ಅಶೋಕ ಕಾಂಬ್ಲೆ, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ನಾಗಜ್ಯೋತಿ. ಬಿ. ಎನ್, ರಾಷ್ಟ್ರೀಯ ಸಮಾಜ ಪಕ್ಷದ ರಾಜಕುಮಾರ್ ಅಪ್ಪಣಾ ಹೋನ್ನಕಟ್ಟಿ, ನಕಿ ಭಾರತೀಯ ಏಕತಾ ಪಕ್ಷದ ರಾಮಜಿ ಹರಿಜನ್, ಪಕ್ಷೇತರ ಅಭ್ಯರ್ಥಿ ತಾರಾಬಾಯಿ ಬೋವಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚುತಪ್ಪದೆ ನಿರ್ವಹಿಸಿ: ಡಾ. ರತನ್ ಕನ್ವರ್

ವಿಜಯಪುರ: ಭಾರತೀಯ ಚುನಾವಣೆ ಆಯೋಗ ಸೂಚಿಸಿರುವ ನಿರ್ದೇಶನಗಳನ್ನು ಚಾಚು ತಪ್ಪದೇ ನಿರ್ವಹಿಸಿ ಲೋಕಸಭೆ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಪುರ ಮೀಸಲು ಮತಕ್ಷೇತ್ರದ ಚುನಾವಣಾ ವೀಕ್ಷಕರಾದ ಡಾ.ರತನ್ ಕನ್ವರ್ ಎಚ್. ಗಂಧವಿಚರಣ ಹೇಳಿದರು.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣಾ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು. ಜಿಲ್ಲೆಯ ಮತದಾರ ಮುಕ್ತವಾಗಿ ಮತದಾನ ಮಾಡಲು ಶಾಂತಿಯುತವಾದ, ಸುವ್ಯವಸ್ಥಿತವಾದ ವಾತಾವರಣ ರೂಪಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆಗಳು ಕಂಡು ಬಂದರೆ ಮೊದಲ ಆದ್ಯತೆಯ ಮೇರೆಗೆ ನಿವಾರಿಸಬೇಕು. ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಬೇಕು ಎಂದರು.


ಪೊಲೀಸ್ ವಿಕ್ಷಣಾಧಿಕಾರಿ ಎಂ. ಅರ್ಶಿ ಅವರು ಮಾತನಾಡಿ, ಚುನಾವಣೆಗೆ ಕಾರ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಕಾರ್ಯಕ್ಷಮತೆಯಿಂದ ಕರ್ತವ್ಯ ನಿರ್ವಹಿಸಬೇಕು. ಮತದಾನಕ್ಕೆ ಪ್ರಜೆಗಳ ಸಹಕಾರ ಅತಿ ಅವಶ್ಯಕವಿದ್ದು, ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಕ್ರಮವಹಿಸಬೇಕು ಎಂದರು.


ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2085 ಮತಗಟ್ಟೆಗಳಿದ್ದು, 9,87,974 ಪುರುಷ, 9,57,906 ಮಹಿಳಾ, 210 ಇತರೆ ಮತದಾರರು ಸೇರಿದಂತೆ ಒಟ್ಟು 19,46,090 ಮತದಾರರು ಇದ್ದಾರೆ. ಇದರಲ್ಲಿ 21,803 ವಿಶೇಷ ಚೇತನ ಮತದಾರರು, 44,169 ಯುವ ಮತದಾರರು, 17,157 ಹಿರಿಯ (85 ವರ್ಷ ಮೇಲ್ಪಟ್ಟ) ಮತದಾರರು, 1,882 ಸೇವಾ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.


ಇಲ್ಲಿಯವರೆಗೆ ವಶಪಡಿಸಿಕೊಂಡ ಅಕ್ರಮ ಹಣ, ಮದ್ಯ, ಗಾಂಜಾ ಮಾದಕ ವಸ್ತುಗಳ ಒಟ್ಟು ಮೌಲ್ಯ 3.45 ಕೋಟಿ ರೂಪಾಯಿ ಆಗುತ್ತದೆ. 118 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಒಟ್ಟು 29 ಚೆಕ್ ಪೋಸ್ಟ್ಗಳನ್ನೂ ಸ್ಥಾಪಿಸಲಾಗಿದೆ. ಅದರಲ್ಲಿ 11 ಅಂತರ್ ರಾಜ್ಯ, 13 ಅಂತರ್ ಜಿಲ್ಲಾ ಹಾಗೂ 5 ಸ್ಥಳೀಯ ನಾಕಗಳ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.


ಜಿಲ್ಲೆಯಲ್ಲಿ ಒಟ್ಟು 2363 ಪರವಾನಿಗೆ ಪಡೆದ ಶಸ್ತ್ರಾಸ್ತ್ರಗಳ ಪೈಕಿ 2274 ಶಸ್ತ್ರಾಸ್ತ್ರಗಳ ಠೇವಣಿ ಪಡೆಯಲಾಗಿದೆ. ಬ್ಯಾಂಕ್ ಹಾಗೂ ಜೀವ ಬೆದರಿಕೆ ಪ್ರಕರಣ ಸೇರಿದಂತೆ ಒಟ್ಟು 54 ಶಸ್ತ್ರಾಸ್ತ್ರ ಗಳಿಗೆ ವಿನಾಯತಿ ನೀಡಲಾಗಿದೆ ಎಂದು ತಿಳಿಸಿದರು.


ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಹಲವು ರಚನಾತ್ಮಕ ಚಟುವಟಿಕೆ ಗಳನ್ನ ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ 372 ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. 40 ಮಹಿಳಾ ಮತಗಟ್ಟೆ ಸ್ಥಾಪಿಸಲಾಗುವುದು, 8 ಮತಗಟ್ಟೆಗಳನ್ನು ವಿಶೇಷ ಮಾದರಿ ರೀತಿಯಲ್ಲಿ ಸ್ಥಾಪಿಸಲಾಗುವುದು. ಸೇವಾ ಮತದಾರರಿಗೆ 8 ಮತಗಟ್ಟೆಗಳನ್ನು, ಸ್ಥಾಪಿಸಲಾಗುವುದು ಎಂದು ತಿಳಿಸಿದರು.


ಸಭೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories