
ಕೋವಿಡ್: ಆಮ್ಲಜನಕ ನಿರ್ವಹಣೆಗೆ ಕ್ರಮ
ಬೀದರ ಮೇ ೦೪ (ಕ.ವಾ.): ಕೊರೊನಾ ವೈರಸ್ (ಕೋವಿಡ್-೧೯) ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾಡಳಿತವು ವಿಶೇಷ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸರ್ಕಾರಿ ಆಸ್ಪತ್ರೆ ಹಳೆ ಕಟ್ಟಡದಲ್ಲಿ ಆಮ್ಲಜನಕದ ನಿರ್ವಹಣೆ ಬಗ್ಗೆ ಪ್ರತಿ ದಿನದ ವರದಿಯನ್ನು ಕೋವಿಡ್ ವಾರ್ ರೂಮ್ಗೆ ಸಲ್ಲಿಸಲು ನೋಡಲ್ ಅಧಿಕಾರಿ ಹಾಗೂ ಸಹಾಯಕ ಸಿಬ್ಬಂದಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಆದೇಶ ಹೊರಡಿಸಿದ್ದಾರೆ.
ನೋಡಲ್ ಅಧಿಕಾರಿಗಳು: ಡಾ.ಸಿ.ಜಿ.ಪಾಟೀಲ್ ಎಚ್ಓಡಿ ಅನೆಷ್ಟೇಟಿಯಾ ಬ್ರಿಮ್ಸ್ ಬೀದರ., ಡಾ.ಯೋಗೇಶ ಕಾಮಶೆಟ್ಟಿ ಎಚ್ಓಡಿ ಪಾಮಾಲೋಜಿ ಬ್ರಿಮ್ಸ್, ಬೀದರ., ಡಾ.ವಿಜಯಕುಮಾರ ಅಂತಪ್ಪನವರ, ಎಚ್ಓಡಿ ಫಿಜಿಶಿಯನ್ ಬ್ರಿಮ್ಸ್, ಬೀದರ., ಸಹಾಯಕರು: ಸತೀಶ ವಾಲೆ, ಜಿಲ್ಲಾಧಿಕಾರಿಗಳ ಕಚೇರಿ, ಬೀದರ (೯೬೦೬೬೮೭೮೯೩).
ಮಾರುತಿರಾವ್ ತಾಂದಳೆ ನಿಧನಕ್ಕೆ ಸಚಿವರಾದ ಪ್ರಭು ಚವ್ಹಾಣ್ ಸಂತಾಪ
ಬೀದರ, ಮೇ ೦೪ (ಕರ್ನಾಟಕ ವಾರ್ತೆ): ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಾರುತಿರಾವ್ ತಾಂದಳೆ ಅವರ ನಿಧನಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ್ ಅವರು ಸಂತಾಪ ಸೂಚಿಸಿದ್ದಾರೆ.
ಮಾಮಾ ಎಂದೇ ಗುರುತಿಸಿಕೊಂಡಿದ್ದ ಮಾರುತಿರಾವ್ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಯಾವುದೇ ವಿಷಯವನ್ನು ನೇರವಾಗಿ ಹೇಳುತ್ತಿದ್ದರು. ದೇಶದ ಪ್ರಥಮ ಪ್ರಧಾನಿಯಿಂದ ಪ್ರಸ್ತುತ ಪ್ರಧಾನ ಮಂತ್ರಿವರೆಗೆ ಅನೇಕ ಗಣ್ಯ ವ್ಯಕ್ತಿಗಳ ಛಾಯಾಚಿತ್ರಗಳನ್ನು ತೆಗೆದ ಖ್ಯಾತಿ ಹೊಂದಿದ್ದವರು. ವಯಸ್ಸಾದರೂ ಯಾವಾಗಲೂ ಲವಲವಿಕೆಯಿಂದ ಕೆಲಸ ಮಾಡುವ ಕ್ರಿಯಾಶೀಲ ಗುಣದವರು. ತಮ್ಮನ್ನು ಭೇಟಿಯಾದಾಗೆಲ್ಲ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸುತ್ತಿದ್ದರು ಎಂದು ಮಾರುತಿರಾವ್ ಮಾಮಾ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ್ದಾರೆ.
ಮಾರುತಿರಾವ್ ಅವರ ವೃತ್ತಿನಿಷ್ಠೆ ಹಾಗೂ ಪರಿಶ್ರಮ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ನಿಧನದಿಂದ ಜಿಲ್ಲೆಯ ಮಾಧ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಮಾರುತಿರಾವ್ ತಾಂದಳೆ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ಅವರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.




