
ಆಗುಂಬೆಯಲ್ಲಿ ಅಪಘಾತ: ತಡೆಗೋಡೆಯಿಲ್ಲದಿದ್ದರೆ ದೊಡ್ಡ ಅಪಾಯ!
ಶಿವಮೊಗ್ಗ,: ಶಿವಮೊಗ್ಗ-ಉಡುಪಿ ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿ ಪ್ರಪಾತದತ್ತ ಮುಖ ಮಾಡಿ ನಿಂತಿದೆ. ಅದೃಷ್ಟವಶಾತ್ ದೊಡ್ಡ ಅಪಾಯ ತಪ್ಪಿದಂತಾಗಿದೆ.

ಗುರುವಾರ ಆಗುಂಬೆ ಘಾಟ್ ರಸ್ತೆಯ 6 ಮತ್ತು 7ನೇ ತಿರುವಿನ ಮಧ್ಯೆ ಈ ಘಟನೆ ಸಂಭವಿಸಿದೆ. ಭತ್ತ ತುಂಬಿದ್ದ ಲಾರಿ ಶಿವಮೊಗ್ಗದಿಂದ ಹೆಬ್ರಿಗೆ ತೆರಳುತಿತ್ತು. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಮುನ್ನುಗ್ಗಿದೆ.
ತಡೆಗೋಡೆಯ ಕಲ್ಲುಗಳು ಲಾರಿಯ ಛಾಸಿಗೆ ತಾಗಿದ್ದರಿಂದ ಲಾರಿ ನಿಂತಿದೆ. ಕ್ಯಾಂಟರ್ನಲ್ಲಿ ಭತ್ತದ ಲೋಡ್ ಇದ್ದಿದ್ದರಿಂದ ಲಾರಿ ಪ್ರಪಾತಕ್ಕೆ ಧುಮುಕದೆ ನಿಂತಿದೆ.ಲಾರಿಯ ಚಾಲಕನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಕೆಲಕಾಲ ಘಾಟಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಭಾರೀ ವಾಹನ ಸಂಚಾರ ಸಾಮಾನ್ಯವಾಗಿ ಮಳೆಗಾಲದಲ್ಲಿ ಆಗುಂಬೆ ಘಾಟ್ನಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗುತ್ತದೆ. ಈ ಬಾರಿಯೂ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಮಳೆ ಕಡಿಮೆಯಾಗಿದ್ದರಿಂದ ಭಾರಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಯಿತು.
ಮಳೆಯಾದರೆ ಮಾತ್ರ ಭಾರೀ ವಾಹನ ಸಂಚಾರ ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಕಳೆದೆರಡು ದಿನದಿಂದ ಮಳೆಯಾಗುತ್ತಿದ್ದು, ಭಾರೀ ವಾಹನ ಸಂಚಾರ ನಿರ್ಬಂಧ ವಿಧಿಸಿರಲಿಲ್ಲ.ಮಳೆಯಾದ ಸಂದರ್ಭ ಘಾಟ್ನಲ್ಲಿ ಭಾರೀ ವಾಹನ ಸಂಚರಿಸಿದರೆ ರಸ್ತೆ ಕುಸಿಯುವ ಸಾಧ್ಯತೆ ಇದೆ. ಅಲ್ಲದೆ ಜಾರುವಿಕೆಯು ಹೆಚ್ಚಿರುತ್ತದೆ. ಇಂತಹ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ವಾಹನಗಳು ಪ್ರಪಾತಕ್ಕೆ ಉರುಳುವ ಭೀತಿ ಇರುತ್ತದೆ.
ಆಗುಂಬೆ ಘಾಟ್ ರಸ್ತೆಯ ತಿರುವುಗಳು ಬಹಳ ಅಪಾಯಕಾರಿ. ಅದರಲ್ಲೂ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಾಗಬೇಕಾದರೆ ಚಾಲಕರು ಎಚ್ಚರಿಕೆಯಿಂದ ಇರಬೇಕು. ಘಾಟ್ ರಸ್ತೆಯ ಹಲವು ಕಡೆ ಲಾರಿಗಳು ಪ್ರಪಾತಕ್ಕೆ ಬಿದ್ದಿವೆ. ಅಲ್ಲಿ ಲಾರಿಗಳ ನೋಂದಣಿ ಸಂಖ್ಯೆ ಬೋರ್ಡ್ಗಳನ್ನು ಹಾಕಲಾಗಿದೆ.




