
Featured StoryINFORAMATION
SIR | ಗಣತಿ ನಮೂನೆ ಭರ್ತಿ ಮಾಡುವ ವಿಧಾನ ಸರಳವಾಗಿ ಕಲಿಯಿರಿ
ಸ್ಪೆಷಲ್ ಇಂಟೇನ್ಸೀವ್ ರಿವಿಜನ್ ಅಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಕರ್ನಾಟಕದಲ್ಲಿ (Karnataka) ಎಸ್ಐಆರ್ (SIR) ನಡೆಸಲಾಗುತ್ತಿದೆ. ಇದೇ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ಭೇಟಿ ನೀಡಲಿದ್ದಾರೆ. ಕಡ್ಡಾಯವಾಗಿ ಎಲ್ಲ ಮತದಾರರು ಅರ್ಜಿ ನಮೂನೆಯನ್ನು ತುಂಬಬೇಕಾಗಿದೆ.
ಗಣತಿ ನಮೂನೆ ಭರ್ತಿ ಮಾಡುವ ವಿಧಾನ
- ಗಣತಿ ಪ್ರತಿಯ ಒಂದು ಭಾಗದಲ್ಲಿ ಮತದಾರರ ಹೆಸರು, ಎಪಿಕ್ (EPIC) ಸಂಖ್ಯೆ, ವಿಳಾಸ, ವಿಧಾನಸಭಾ ಕ್ಷೇತ್ರದ ವಿವರಗಳು ಹಾಗೂ ಹಳೆಯ ಭಾವಚಿತ್ರವನ್ನು ಈಗಾಗಲೇ ಮುದ್ರಿಸಲಾಗಿರುತ್ತದೆ. ಇದರೊಂದಿಗೆ ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಹೆಸರು ಮತ್ತು ಮೊಬೈಲ್ ಸಂಖ್ಯೆಯೂ ಇರುತ್ತದೆ. ಒಂದು ವೇಳೆ ಫಾರ್ಮ್ನಲ್ಲಿ ಮುದ್ರಿತವಾಗಿರುವ ಹಳೆಯ ಭಾವಚಿತ್ರವು ಅಸ್ಪಷ್ಟವಾಗಿದ್ದರೆ ಅಥವಾ ಹಳೆಯದಾಗಿದ್ದರೆ ಮಾತ್ರ, ಹೊಸದಾದ ಸ್ಪಷ್ಟ ಭಾವಚಿತ್ರವನ್ನು ಅದರ ಪಕ್ಕದ ಜಾಗದಲ್ಲಿ ಅಂಟಿಸಬೇಕು.
- ನಿಮ್ಮ ಹೆಸರು 2002ರ ಮತದಾರರ ಪಟ್ಟಿಯಲ್ಲಿದ್ದರೆ, ಆ ಪಟ್ಟಿಯಲ್ಲಿರುವ ನಿಮ್ಮದೇ ವಿವರಗಳನ್ನು ಇಲ್ಲಿ ಭರ್ತಿ ಮಾಡಬೇಕು. ಒಂದು ವೇಳೆ 2002ರಲ್ಲಿ ನಿಮ್ಮ ಹೆಸರು ನೋಂದಣಿಯಾಗಿರದಿದ್ದರೆ, ನಿಮ್ಮ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯ 2002ರ ಮತದಾರರ ಪಟ್ಟಿಯ ವಿವರಗಳನ್ನು ಒದಗಿಸಬೇಕಾಗುತ್ತದೆ.
- ಈ 2002ರ ಮತದಾರರ ಪಟ್ಟಿಯ ವಿವರಗಳು ನಿಮ್ಮ ಬೂತ್ ಮಟ್ಟದ ಅಧಿಕಾರಿಗಳ ಬಳಿ ಲಭ್ಯವಿರುತ್ತವೆ ಅಥವಾ ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್ಸೈಟ್ ceo.karnataka.gov.in, ಭಾರತೀಯ ಚುನಾವಣಾ ಆಯೋಗದ ವೆಬ್ಸೈಟ್ voters.eci.gov.in ಮತ್ತು ECINET ಮೊಬೈಲ್ ಆ್ಯಪ್ ಮೂಲಕವೂ ನೀವು ಪಡೆದುಕೊಳ್ಳಬಹುದು.
- ಇನ್ನು ಗಣತಿ ಪ್ರತಿಯಲ್ಲಿ ಪ್ರಸ್ತುತ ವಿವರಗಳನ್ನು ನಮೂದು ಮಾಡಬೇಕು. ನಿಮ್ಮ ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು. ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬಹುದು ಅಥವಾ ಬಿಡಬಹುದು, ಕಡ್ಡಾಯವಲ್ಲ.
- ಕುಟುಂಬದ ಸದಸ್ಯರೊಬ್ಬರ ಅಂದರೆ ಪೋಷಕರು ಅಥವಾ ವಿವಾಹಿತರಾಗಿದ್ದರೆ ಪತಿ/ಪತ್ನಿ ಹೆಸರನ್ನು ಬರೆಯಬೇಕು. ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿದ ನಂತರ, ಫಾರ್ಮ್ನ ಕೆಳಗೆ ಸಹಿ ಮಾಡಬೇಕು ಅಥವಾ ಎಡಗೈ ಹೆಬ್ಬೆರಳಿನ ಗುರುತನ್ನು ಹಾಕಬೇಕು.
- ಇನ್ನು ಕೊನೆಯದಾಗಿ ಸಹಿ ಮಾಡಿದ ಫಾರ್ಮ್ ಅನ್ನು ನಿಮ್ಮ ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಫಾರ್ಮ್ ಅನ್ನು ಪರಿಶೀಲಿಸಿ ಅವರು ಸಹಿ ಮಾಡುತ್ತಾರೆ. ತದನಂತರ, ಒಂದು ಪ್ರತಿಯನ್ನು ಕಚೇರಿಯ ದಾಖಲೆಗಾಗಿ ಇಟ್ಟುಕೊಂಡು, ಮತ್ತೊಂದು ಪ್ರತಿಯನ್ನು ನಿಮಗೆ ನೀಡುತ್ತಾರೆ. ಹೀಗೆ ಹಿಂತಿರುಗಿಸಿದ ಪ್ರತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.
- ಇನ್ನು ಈ ಗಣತಿ ನಮೂನೆಯೊಂದಿಗೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಲಗತ್ತಿಸುವ ಅಗತ್ಯವಿರುವುದಿಲ್ಲ. ಗಣತಿದಾರರು ಪ್ರತಿ ಮನೆಗೆ ಮೂರು ಸಲ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ ಅವರ ಹೆಸರು ಪಟ್ಟಿಗೆ ಸೇರ್ಪಡೆಯಾಗುವುದಲ್ಲ.




