
ವಿಳಂಬವಿಲ್ಲದೆ ಜಾಗ ನೀಡಿ : ಜಿಲ್ಲಾಧಿಕಾರಿ ಸೂಚನೆ
ಮಡಿಕೇರಿ ಜ.7 : ಕಸ ವಿಲೇವಾರಿ, ಸ್ಮಶಾನ, ವಸತಿ, ಅಂಗನವಾಡಿ, ಹೀಗೆ ಹಲವು ಉದ್ದೇಶಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸಂಬಂಧಿಸಿದಂತೆ ತ್ವರಿತವಾಗಿ ಜಾಗ ಗುರುತಿಸಿ ಒದಗಿಸುವಂತೆ ನಿರ್ದೇಶನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಈಗಾಗಲೇ ಅರಣ್ಯ ಹಕ್ಕು ಪತ್ರ ಸಿಕ್ಕಿದವರಿಗೆ ಆರ್ಟಿಸಿ ನೀಡಲಾಗಿದೆ. ಕೆಲವು ಬಾಕಿ ಇದ್ದು, ತಕ್ಷಣ ಆರ್ಟಿಸಿ ನೀಡಬೇಕೆಂದು ತಿಳಿಸಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಮಾತನಾಡಿ ಕೆಲವು ಕಡೆಗಳಲ್ಲಿ ಆರ್ಟಿಸಿ ನೀಡಲು ಬಾಕಿ ಇದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರು ಸಕಾಲ ಯೋಜನೆ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಅವರು ವಿವಿಧ ಉದ್ದೇಶಗಳಿಗೆ ಜಾಗ ಗುರುತು ಸಂಬಂಧ ಇನ್ನಷ್ಟು ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯುವಜನ ಸೇವಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಸ್ವಾಮಿ ಅವರು ಪೊನ್ನಂಪೇಟೆ ಮತ್ತು ಕುಶಾಲನಗರ ಹೊಸ ತಾಲ್ಲೂಕು ರಚನೆಯಾಗಿದ್ದು, ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಒದಗಿಸಬೇಕಾಗಿ ಕೋರಿದರು.
ಡಿಡಿಎಲ್ಆರ್ ಶ್ರೀನಿವಾಸ್, ಐಟಿಡಿಪಿ ಅಧಿಕಾರಿ ಶಿವಕುಮಾರ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಿಂಗರಾಜು, ನಗರಾಭಿವೃದ್ಧಿ ಯೋಜನಾ ಕೋಶದ ರಾಜು, ಜಿಲ್ಲಾ ನೋಂದಾಣಾಧಿಕಾರಿ ಸಿದ್ದೇಶ್, ತಾ.ಪಂ.ಇಒ ಲಕ್ಷ್ಮೀ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ತಹಶೀಲ್ದಾರ್ ಗೋವಿಂದ ರಾಜು, ಮಹೇಶ್, ಯೋಗಾನಂದ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಪ.ಪಂ.ಮುಖ್ಯಾಧಿಕಾರಿಗಳು, ಶಿರಸ್ತೆದಾರರು ಇತರರು ಹಾಜರಿದ್ದರು.




