Udupi

ಅಕ್ರಮ ಕಾಂಪೌಂಡ್: ಕೆಮ್ಮಣ್ಣು ಗ್ರಾಮ ಪಂಚಾಯತ್ ನಲ್ಲಿ ಸದ್ದು ಮಾಡಿದ ಬುಲ್ಡೋಝರ್!

ಕೆಮ್ಮಣ್ಣು : ತೋನ್ಸೆ ಗ್ರಾ ಪಂ ವ್ಯಾಪ್ತಿಯ ಕೆಮ್ಮಣ್ಣು ಹಿಂದೂ ಶಾಲಾ ಕಟ್ಟಡದ ಪಡುಬದಿಯಿಂದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಗ್ರಾಮ ಪಂಚಾಯತ್ ಪರವಾನಿಗೆ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವ ಪಾಗಾರವನ್ನು ಗ್ರಾಮ ಪಂಚಾಯತಿನಿಂದ ಇಂದು ಪೊಲೀಸ್ ರಕ್ಷಣೆಯೊಂದಿಗೆ ತೆರವುಗೊಳಿಸಲಾಯಿತು.


ಕೆಮ್ಮಣ್ಣು ನಿವಾಸಿ ಗಣೇಶ್ ಆಚಾರ್ ಎಂಬವರ ಈ ಅಕ್ರಮ ರಚನೆಯನ್ನು ಸುಮಾರು 3 ವರ್ಷಗಳ ಹಿಂದೆ ನಡೆಸಲು ಮುಂದಾಗಿದ್ದರು. ಈ ಅಕ್ರಮದ ಬಗ್ಗೆ ಪಿ.ಮಾಧವರಾವ್ ಎಂಬವರು ಸಾರ್ವಜನಿಕರ ಸಹಿ ಇರುವ ಪತ್ರದೊಂದಿಗೆ ಇದನ್ನು ಗ್ರಾ ಪಂ ನ ಗಮನಕ್ಕೆ ತಂದಿದ್ದು, ಗ್ರಾ ಪಂ ನಿಂದ ಪರವಾನಿಗೆ ಪಡೆಯದೇ ಯಾವುದೇ ರಚನೆ ನಡೆಸಬಾರದು ಎಂದು ಗಣೇಶ್ ಆಚಾರ್ ಅವರ ಗಮನಕ್ಕೆ ತಂದಾಗ ಅವರು ನಿರ್ಮಿಸಲು ಮುಂದಾಗಿದ್ದ ರಚನೆಯನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆ ಬಳಿಕ ಗ್ರಾ ಪಂ ನಿಂದ ಅವರು ನಿರ್ಮಿಸಿದ ರಚನೆಯನ್ನು ತೆರವುಗೊಳಿಸಲು ಸೂಚಿಸಿ ತಿಳುವಳಿಕೆ ಪತ್ರಗಳ ಮೂಲಕ ಹಲವಾರು ಬಾರಿ ತಿಳಿಸಿದ್ದರೂ ಅವರು ತಾನು ಮಾಡಿರುವುದು ಅನಧಿಕೃತ ಕಾಮಗಾರಿ ಎನ್ನುವುದರ ಬಗ್ಗೆ ಸರಿಯಾಗಿ ಸ್ಪಂದಿಸದೇ ವಿವಿಧ ಪತ್ರ ಬರೆದು ಗ್ರಾ ಪಂ ನ ಸಮಯ ವ್ಯರ್ಥ ಪಡಿಸುತ್ತಾ ಬಂದಿದ್ದರು. ಒಮ್ಮೆ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಕಾರಣವಾಗಿರುವ ಅಕ್ರಮ ರಚನೆಯನ್ನು ತೆರವುಗೊಳಿಸಲು ತಿಳಿ ಹೇಳಲು ಅವರ ಮನೆಗೇ ತೆರಳಿದಾಗಲೂ ಅವರು ಸಿಗದೇ ಆ ಪ್ರಯತ್ನ ವಿಫಲವಾಗಿತ್ತು. ಅದಾಗಿ ಕೆಲವು ಸಮಯದ ಬಳಿಕ ಗ್ರಾ ಪಂ ಗೆ ಭೇಟಿ ನೀಡಿದ ಅವರಲ್ಲಿ ಮೌಖಿಕವಾಗಿ ಗ್ರಾ ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ತಿಳಿಸಿದಾಗ ಶಾಸಕರ ಅನುದಾನದಿಂದ ಅಲ್ಲಿ ರಸ್ತೆ ಅಭಿವೃದ್ಧಿ ಪಡಿಸಲಾಗಿದ್ದು ರಸ್ತೆ ತನ್ನ ಜಾಗದಲ್ಲಿದೆ. ಹಾಗಾಗಿ ತನ್ನ ರಚನೆಯನ್ನು ಸಕ್ರಮಗೊಳಿಸಬೇಕಾಗುತ್ತದೆ ಅಂತ ತಿಳಿಸಿದ್ದರು. ಹಾಗಾದರೇ ಸರ್ವೆ ಇಲಾಖೆಯಿಂದ ಅಳತೆ ನಡೆಸಿ ರಸ್ತೆ ಯಾರ ಜಾಗದಲ್ಲಿ ನಿರ್ಮಾಣವಾಗಿದೆ ಎನ್ನುವುದನ್ನು ದೃಢಪಡಿಸಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದಾಗ ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೂ ಅವರು ಸರ್ವೆ ನಡೆಸಲು ಮುಂದಾಗಿರಲಿಲ್ಲ. ಇನ್ನೊಂದೆಡೆ ಇದರ ಬೆನ್ನು ಹಿಡಿದಿದ್ದ ಮಾದವ ರಾವ್ ಅವರು ಈ ವಿಷಯ ತಿಳಿದು ತಾನೇ ಸರ್ವೆ ಇಲಾಖೆಗೆ ಅರ್ಜಿ ಸಲ್ಲಿಸಿ ಸರ್ವೆ ನಡೆಸಿ ರಸ್ತೆ ಯಾರ ಜಾಗದಲ್ಲಿದೆ ಎನ್ನುವುದನ್ನು ದೃಢಪಡಿಸುವುದಾಗಿ ತಿಳಿಸಿ ಸರ್ವೆ ಇಲಾಖೆ ನಿಯಮಗಳಂತೆ ಸರ್ವೆಗೆ ದಿನ ನಿಗದಿಪಡಿಸಿ ಗ್ರಾ ಪಂ ನ ಆಡಳಿತ ಮಂಡಳಿಯ ಮತ್ತು ಗಣೇಶ್ ಆಚಾರ್ ಅವರ ಸಮಕ್ಷಮ ಸರ್ವೆ ನಡೆಸಿದಾಗ ರಸ್ತೆ ನಿರ್ಮಾಣದ ಬಹುತೇಕ ಭಾಗ ಅವರದಲ್ಲ ಎನ್ನುವುದು ಗಮನಕ್ಕೆ ಬಂದಿತ್ತು. ಸರ್ವೆ ಇಲಾಖೆಯವರು ಸರ್ವೆ ನಡೆಸುವಾಗ ದಿಕ್ಕು ತಪ್ಪಿಸಲು ಸರ್ವೆಯರ್ ಅವರನ್ನು ಅಲ್ಲಲ್ಲಿ ತಿರುಗಾಡಿಸಿ ಗಡಿಯ ನಿಖರತೆಯ ಬಗ್ಗೆ ಗುರುತು ಹೇಳಿದ್ದ ಆಚಾರ್ ಅವರು ಕಡೆಗೆ ಸರ್ವೆಯರ್ ಅವರ ಮಹಜರು ಮತ್ತು ಹೇಳಿಕೆಗೆ ಸಹಿ ಮಾಡುವ ಮೂಲಕ ರಸ್ತೆ ತನ್ನ ಜಾಗದಲ್ಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಅದರ ಬಳಿಕ ಸಮಸ್ಯೆಯ ಸೌಹಾರ್ದಯುತ ಪರಿಹಾರಕ್ಕೆಂದು ವಿಶೇಷ ಸಭೆ ನಡೆಸಿ ಗಣೇಶ್ ಆಚಾರ್ ಅವರನ್ನು ಕರೆಸಿ ಅಕ್ರಮ ರಚನೆ ತೆರವುಗೊಳಿಸಲು ಕೇಳಿಕೊಂಡಾಗ ಮುಂದಿನ ವಾರ ದೀಪಾವಳಿ ಹಬ್ಬ ಇದೆ. ಅದಾದ ಬಳಿಕ ತಾನೇ ತೆರವುಗೊಳಿಸುವುದಾಗಿ ಆಡಳಿತ ಮಂಡಳಿಗೆ ಸಭೆಯಲ್ಲಿ ವಾಗ್ದಾನ ನೀಡಿದ್ದರು. ಆದರೂ ಅವರು ತೆರವಿಗೆ ಮುಂದಾಗುವ ಸೂಚನೆಗಳು ಕಂಡು ಬಂದಿರಲಿಲ್ಲ. ಮಾದವ ರಾವ್ ಅವರು ಈ ವಿಷಯದ ಬಗ್ಗೆ ಗ್ರಾ ಪಂ ಗೆ ನ್ಯಾಯವಾದಿಗಳ ಮೂಲಕ ನೋಟಿಸು ಕಳುಹಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಮತ್ತು ನಾಗರಿಕ ಸುರಕ್ಷತೆಯ ಕಾನೂನಿನಂತೆ ತೆರವುಗೊಳಿಸಲು ಮುಂದಾಗಬೇಕೆಂದು ಆಗ್ರಹಿಸಿದ್ದರು ಮತ್ತು ಈ ಬಗ್ಗೆ ಜಿಲ್ಲಾ ಪಂಚಾಯತಿನ ಗಮನಕ್ಕೂ ತಂದಿದ್ದರು.


ಗ್ರಾ ಪಂ ನಿಂದ ಗಣೇಶ್ ಆಚಾರ್ ಅವರಿಗೆ ಮತ್ತೆ ನೋಟೀಸ್ ನೀಡಿ ದೀಪಾವಳಿಯ ಬಳಿಕ ತೆರವುಗೊಳಿಸುವುದಾಗಿ ವಾಗ್ದಾನ ನೀಡಿದ್ದನ್ನು ನೆನಪಿಸಲಾಗಿತ್ತು. ಆ ಪತ್ರದ ಸೂಚನೆ ಪಾಲಿಸುವ ಬದಲು ಆಚಾರ್ ಅವರು ಗ್ರಾ ಪಂ ದೂರುದಾರರ ಅಕ್ರಮಗಳನ್ನು ಗಮನಿಸುತ್ತಿಲ್ಲ ಮತ್ತು ಸರ್ವೆ ನಡೆಸಿರುವುದೇ ಸರಿಯಾಗಿಲ್ಲ ಅಂತ ತಿಳಿಸಿ ಗ್ರಾ ಪಂ ನ ಆಡಳಿತ ಮಂಡಳಿ ಮತ್ತು ಅಧಿಕಾರಿಗಳನ್ನು ನಿಂದಿಸಿ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ಗ್ರಾ ಪಂ ನ ಅಧ್ಯಕ್ಷರು ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸೇರಿರುವುದರಿಂದ ಅವರ ಆದೇಶವನ್ನು ಪಾಲಿಸಲು ಮುಂದಾಗದೇ ಗ್ರಾ ಪಂ ನ ಹಕ್ಕಿಗೆ ಚ್ಯುತಿ ತರುತ್ತಿರುವ ಮತ್ತು ಪರೋಕ್ಷ ಅಸ್ಪ್ರಶ್ಯತೆಯ ಮನೋಭಾವ ಪ್ರದರ್ಶಿಸುತ್ತಾ ಬಂದಿರುವುದಾಗಿದ. ಹಾಗಾಗಿ ಆಚಾರ್ ಅವರಿಗೆ ಸಭೆಯ ನಿರ್ಣಯ ತಿಳಿಸುವ ಪತ್ರ ಬರೆದು ಒಂದು ವಾರದ ಕಾಲಾವಕಾಶವನ್ನು ನೀಡಿ ಅಂತಿಮ ನೋಟಿಸ್ ಕಳುಹಿಸಲಾಗಿತ್ತು. ನೋಟೀಸ್ ನೀಡಲು ತೆರಳಿದ್ದ ಗ್ರಾ ಪಂ ಸಿಬ್ಬಂದಿ ಪರಿಶಿಷ್ಟ ಜಾತಿಗೆ ಸೇರಿದ್ದು ಅವರಿಂದ ನೋಟೀಸು ಸ್ವೀಕರಿಸದೇ ವಾಪಾಸು ಕಳಿಸಿದ್ದರು. ಬಳಿಕ ರಿಜಿಸ್ಟರ್ಡ್ ಅಂಚೆ ಮೂಲಕ ನೋಟೀಸ್ ಕಳುಹಿಸಿದ್ದರೂ ಅದನ್ನು ತೆಗೆದುಕೊಳ್ಳಲು ಕಾಲಾವಕಾಶ ಇದೆ ಎಂದು ಅಂಚೆ ಇಲಾಖಾ ಸಿಬ್ಬಂದಿಗೂ ತಿಳಿಸಿ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದರು. ಇನ್ನೊಂದೆಡೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳೂ ಮೂರು ವರ್ಷದಿಂದ ಅಕ್ರಮ ರಚನೆ ಮಾಡಿದ್ದರೂ ಗ್ರಾ ಪಂ ತೆರವಿಗೆ ಮುಂದಾಗದಿರುವುದು ಸರಿಯಲ್ಲಾ. ಕೂಡಲೇ ತೆರವುಗೊಳಿಸಿ ವರದಿ ಸಲ್ಲಿಸಲು ಸೂಚಿಸಿದ್ದರು‌. ಈ ಎಲ್ಲಾ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಅಕ್ರಮದ ತೆರವನ್ನು ಗ್ರಾ ಪಂ ನಿಂದಲೇ ಮಾಡುವುದಾಗಿ ನಿರ್ಧರಿಸಿ ಪೊಲೀಸ್ ಇಲಾಖೆಗೆ ವಿವರವಾದ ಪತ್ರ ಬರೆದು ರಕ್ಷಣೆ ಒದಗಿಸಲು ಕೇಳಿಕೊಂಡು ಇಂದು ಜೆಸಿಬಿ ತರಿಸಿ ತೆರವುಗೊಳಿಸಲಾಯಿತು. ಆರಂಭದಲ್ಲಿ ತೆರವಿನ ಬಗ್ಗೆ ತಕರಾರು ತೆಗೆದ ಆಚಾರ್ ಯಾವುದೇ ಲೈಸನ್ಸ್ ಪಡೆಯದೇ ನಿರ್ಮಿಸಿರುವುದು ಸರಿಯಲ್ಲ. ತೆರವಿಗೆ ತಡೆ ಒಡ್ಡಿದ್ದಲ್ಲಿ ಬಂಧನಕ್ಕೆ ಒಳಪಡಿಸುವುದು ಅನಿವಾರ್ಯ ಎಂದು ಎಚ್ಚರಿಸಿದ ಪೋಲೀಸರ ಎಚ್ಚರಿಕೆಗೆ ತಣ್ಣಗಾದರು. ಅದರಂತೆ ತೆರವುಗೊಳಿಸುವುದನ್ನು ಮುಂದುವರೆಸಿ ಅಕ್ರಮ ರಚನೆಗೆ ಬಳಸಿದ ಕೆಂಪು ಕಲ್ಲುಗಳು ಮತ್ತು ಕಬ್ಬಿಣದ ಗೇಟುಗಳನ್ನು ಗ್ರಾ ಪಂ ನ ವಶಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಲತಾ, ಉಪಾಧ್ಯಕ್ಷರಾದ ಅರುಣ್ ಫೆರ್ನಾಂಡೀಸ್, ಸದಸ್ಯರುಗಳಾದ ಯಶೋದಾ, ಆಶಾ, ಕುಸುಮ, ಸಂಧ್ಯಾ, ಮುಮ್ತಾಜ್, ವತ್ಸಲಾ ವಿನೋದ್, ಸುಜ್ಹಾನ ಡಿಸೋಜಾ, ಪ್ರತಿಭಾ, ಪುರಂದರ ಟಿ.ಕುಂದರ್, ಧೀರೇಂದ್ರ, ಮಹಮ್ಮದ್ ಇದ್ರೀಸ್, ಹೈದರ್ ಆಲಿ, ಪ್ರಶಾಂತ್ ಕೆಮ್ಮಣ್ಣು , ಪಂಚಾಯತ್ ಪಿಡಿಒ ಕಮಲಾ, ಕಾರ್ಯದರ್ಶಿ ದಿನಕರ್, ಸಿಬ್ಬಂದಿಗಳಾದ ಸಂತೋಷ್, ಪ್ರಕಾಶ್ ಮಲ್ಪೆ ಠಾಣೆಯ ಎ ಎಸ್ ಐ ರವೀಚಂದ್ರ ಮತ್ತು ಇತರ ನಾಲ್ಕು ಸಿಬ್ಬಂದಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ಉಪಸ್ಥಿತರಿದ್ದು ಸಹಕರಿಸಿದರು.

One Comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button