
ಉಡುಪಿ | ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ
ಉಡುಪಿ: ದಲಿತ ಸಂಘರ್ಷ ಐಕ್ಯಾತ ಸಮಿತಿ, ಉಡುಪಿ ಮತ್ತು ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಇಂದು ಉಡುಪಿಯ ಬೋರ್ಡ್ ಹೈಸ್ಕೂಲ್ ಬಳಿ ರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ನಡೆಸಿದ ಲೈಂಗಿಕ ದೌರ್ಜನ್ಯ ವಿರೋಧಿಸಿ ಆತನನ್ನು ಬಂಧಿಸಲು ಆಗ್ರಹಿಸಿ ಪಂಜಿನ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ ಜರುಗಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರೊ. ಫಣಿರಾಜ್, ಹೀನಾಯ ದೌರ್ಜನ್ಯ ನಡೆದಾಗ ಗ್ರಾಮ ಗ್ರಾಮದಲ್ಲಿ ಪ್ರತಿಭಟನೆ ನಡೆಯಬೇಕು. ಆ ಕಾರಣಕ್ಕಾಗಿ ಉಡುಪಿ ಇಂದು ಪ್ರತಿಭಟಿಸುತ್ತಿದೆ. ಬಿಜೆಪಿ ಸರಕಾರದ್ದು ಪಾಪದ ಕೊಡ ತುಂಬಿರುವುದು ಮಾತ್ರವಲ್ಲ, ಯುಮುನಾ, ಗಂಗೆ ಎಲ್ಲವೂ ಪಾಪದಿಂದ ತುಂಬಿ ಹೋಗಿದೆ. ನದಿ ನೀರನ್ನು ಕಲುಷಿತಗೊಳಿಸಿದ ಹಾಗೆ ಜನರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ ಎಂದರು.
ರೈತರ ಅನ್ನ ಕಸಿಯುವ ಕರಾಳ ಕೃಷಿ ಕಾಯಿದೆ ಜಾರಿಗೆ ತಂದಿದ್ದರು. ರೈತರ ನೆಲ ಕಸಿಯಲು ಕಾನೂನು ತರಲಾಗಿತ್ತು. ಒಂದು ವರ್ಷ ಪ್ರತಿ ಭಟನೆ ನಡೆಸಲಾಯಿತು. ಅವರ ಮೇಲೆ ಪೋಲಿಸ್ ದೌರ್ಜನ್ಯ ಮಾಡಲಾಯಿತು. ಕೊನೆಗೂ ನ್ಯಾಯ ಗೆದ್ದಿತು. ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಪದಕಗಳು ಬಂದಾಗ ಪೋಟೋ ತೆಗೆಯುವ ಪ್ರಧಾನಿ, ಸರ್ಕಾರಿ ಪ್ರಭಾವಿ ವ್ಯಕ್ತಿಯಾದಾಗ ಅನ್ಯಾಯವಾದಾಗ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕಿತ್ತು. ಇವರ ವರ್ತನೆಯಿಂದ ಯಾವ ಹೆಣ್ಣು ಮಕ್ಕಳು ಸುರಕ್ಷಿತರಲ್ಲ ಎಂಬುವುದು ಸಾಬೀತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಇದ್ರಿಸ್ ಹೂಡೆ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮೋದಿ ಸರಕಾರದಲ್ಲಿ ಸಾಮಾನ್ಯವಾಗಿದೆ. ಇವರ ಧ್ಯೇಯ ಬೇಟಿ ಪಡಾವೋ ಅಲ್ಲ ಬೇಟಿ ಪಟಾವೋ ಆಗಿದೆ.
ಹತ್ರಾಸ್ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ಥೆಯ ಶವ ಹೇಳದೆ ಕೇಳದೆ ಸುಡಲಾಗುತ್ತದೆ. ಹಲವು ಪ್ರಕರಣದಲ್ಲಿ ಇವರ ದೌರ್ಜನ್ಯ ಸಾಬೀತಾಗಿದೆ.
ದೇಶದ ಪ್ರತಿಷ್ಠಿತ ಕ್ರೀಡಾ ಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತದೆ. ಪ್ರತಿಭಟಿಸಿದಾಗ ದೌರ್ಜನ್ಯ ಎಸಗುತ್ತಾರೆ.ಉಡುಪಿಯ ಸಂಸದೆ ಮಹಿಳೆ ಆದರೆ ಅವರು ಮಹಿಳಾ ದೌರ್ಜನ್ಯದ ಕುರಿತು ಮಾತನಾಡಲು ಉತ್ಸುಕರಿಲ್ಲ, ಅವರು ಹೆಣದ ರಾಜಕೀಯದ ಕುರಿತು ಮಾತನಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.




