
ಶಾ-ಸಿದ್ಧರಾಮಯ್ಯ ಭೇಟಿ; ಅಕ್ಕಿ ಪೂರೈಕೆಗೆ ಒಪ್ಪಿಗೆ?
ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸಿದ್ದರಾಮಯ್ಯ ಮೊದಲ ಬಾರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.
ಇದೊಂದು ಸೌಜನ್ಯಯುತ ಭೇಟಿ ಎಂದು ಹೇಳಲಾಗಿದೆಯಾದರೂ ಭೇಟಿಯಲ್ಲಿ ರಾಜಕೀಯ ಕೂಡ ಅಡಗಿದೆ ಎನ್ನುವುದು ಖಚಿತ, ಅಮಿತ್ ಶಾ ಭೇಟಿಯ ವೇಳೆ ಸಿದ್ದರಾಮಯ್ಯ ‘ಅನ್ನ ಭಾಗ್ಯ’ ಯೋಜನೆಗೆ ಅಕ್ಕಿ ಖರೀದಿ ಸೇರಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ, ಇದಕ್ಕೆ ಅಮಿತ್ ಶಾ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಸಿದ್ದರಾಮಯ್ಯ ಮತ್ತು ಶಾ ಅವರ ಏಕಾಏಕಿ ಭೇಟಿ ಏಕೆ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ, ಕೇಂದ್ರದ ಇತ್ತೀಚಿನ ನೀತಿಯು ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ, ಏಕೆಂದರೆ ಇದು ಬಡವರ ‘ದಿನಕ್ಕೆ ಎರಡು ಊಟ’ ಯೋಜನೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಸಿದ್ದರಾಮಯ್ಯ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ ಎಂದು ಸಿಎಂಒ ಮೂಲಗಳು ತಿಳಿಸಿವೆ. ಹಾಗಾಗಿ, ರಾಜ್ಯಗಳಿಗೆ ಆಹಾರಧಾನ್ಯ ನೀಡದಿರುವ ಮನೋಭಾವವನ್ನು ಬದಲಾಯಿಸಿದರೆ ಒಳ್ಳೆಯದು ಎಂದು ಅವರು ಶಾಗೆ ಹೇಳಿದ್ದರು ಎಂದು ತಿಳಿದು ಬಂದಿದೆ.




