Crime

ಬೆಳ್ತಂಗಡಿ: ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆ: ಹಲವು ವಾಹನಗಳಿಗೆ ಡಿಕ್ಕಿ – ಬಾಲಕಿಗೆ ಗಂಭೀರ ಗಾಯ

ಬೆಳ್ತಂಗಡಿ, ಜು.12: ಟಿಪ್ಪರ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಎರಡು ಬಸ್‌ಗಳು, ನಾಲ್ಕು ಕಾರುಗಳು, ಒಂದು ಆಟೋ ರಿಕ್ಷಾ ಜಖಂಗೊಂಡಿದೆ. ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ನಗರದ ಭಾರತ್ ಶೋರೂಂ ಬಳಿ ಗುರುವಾರ ಈ ಘಟನೆ ನಡೆದಿದೆ.

ಬಳಂಜ ಗ್ರಾಮದ ಗುಂಡೇರಿ ನಿವಾಸಿ ವೀಕ್ಷಾ (17) ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಜಿರೆಯಿಂದ ಗುರುವಾಯನಕೆರೆ ಕಡೆಗೆ ಟಿಪ್ಪರ್ ಬರುತ್ತಿತ್ತು. ಮೊದಲು ಟಿಪ್ಪರ್ ಹಿಂದಿನಿಂದ ಬಸ್ ಗೆ ಡಿಕ್ಕಿ ಹೊಡೆದಿದೆ. ನಂತರ ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಎರಡನೆ ಬಾರಿ ಡಿಕ್ಕಿ ಹೊಡೆದ ರಭಸಕ್ಕೆ ಟಿಪ್ಪರ್ ಏಕಾಏಕಿ ಶೋರೂಂ ಕಡೆಗೆ ತಿರುಗಿ ಪಾದಚಾರಿ ವೀಕ್ಷಾಗೆ ಢಿಕ್ಕಿ ಹೊಡೆದು ಶೋರೂಂ ಎದುರು ನಿಲ್ಲಿಸಿದ್ದ ನಾಲ್ಕು ಕಾರು ಹಾಗೂ ಆಟೋ ರಿಕ್ಷಾ ಜಖಂಗೊಂಡಿದೆ.

ವೀಕ್ಷಾ ಟಿಪ್ಪರ್ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊದಲಿಗೆ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು.

ವೀಕ್ಷಾ ಲೈಲಾದಲ್ಲಿ ಕಂಪ್ಯೂಟರ್ ತರಬೇತಿ ತರಗತಿಗೆ ಸೇರಿದ್ದಳು ಮತ್ತು ತನ್ನ ಸ್ನೇಹಿತೆಯೊಂದಿಗೆ ಅದೇ ತರಗತಿಗೆ ಹೋಗುತ್ತಿದ್ದಳು. ವೇಣೂರು ಸರಕಾರಿ ಕಾಲೇಜಿನಲ್ಲಿ ಪಿಯು ಓದಿದ್ದಳು. ಮತ್ತೋರ್ವ ಬಾಲಕಿ ಟಿಪ್ಪರ್‌ನ ಚಕ್ರದಡಿ ಸಿಲುಕಿ ಸ್ವಲ್ಪದರಲ್ಲೆ ಪಾರಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಟಿಪ್ಪರ್ ಚಾಲಕ ಸುರೇಶ್ ವಿರುದ್ಧ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button