ಕೃಷಿ ಸಂಬಂಧಿತ ಕಾಯ್ದೆಗಳ ತಿದ್ದುಪಡಿಯಿಂದ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಕ ಬದಲಾವಣೆ : ವಿವೇಕ್ ರೆಡ್ಡಿ
ಬೆಂಗಳೂರು,ಸೆ.29(ಯುಎನ್ಐ):- ದೇಶದ ತಂತ್ರಜ್ಞಾನದಲ್ಲಿ ಅಗಾಧ ಬದಲಾವಣೆಯಾಗಿದ್ದು, 5ಜಿ ಯುಗದಲ್ಲೂ ಪುರಾತನ ಪಳೆಯುಳಿಕೆ ನಿಯಮಗಳಡಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಕಾನೂನು ವ್ಯಾಪ್ತಿಯಲ್ಲೇ ರೈತರ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎನ್ನುವುದು ಅವೈಜ್ಞಾನಿಕ ಎಂದು ಹಿರಿಯ ವಕೀಲ ಮತ್ತು ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಹೇಳಿದ್ದಾರೆ.
ಕರ್ನಾಟಕ ವಕೀಲರ ಪರಿಷತ್ತು ಏರ್ಪಡಿಸಿದ್ದ ಸಂಸತ್ತಿನಲ್ಲಿ ಇತ್ತೀಚೆಗೆ ಅಂಗೀಕಾರಗೊಂಡಿರುವ ರೈತ ಪರ ಮಸೂದೆಗಳ ಕುರಿತು ಆನ್ ಲೈನ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇದೀಗ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆಯಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಕಾಲದಲ್ಲೂ ಹಳೆಯ ಎಪಿಎಂಸಿ ಕಾನೂನುಗಳು ಅಗತ್ಯವಿದೆಯೇ. ರೈತರ ಆದಾಯ ದ್ವಿಗುಣಗೊಳಿಸಲು ಕಾನೂನಿನಲ್ಲಿ ಬದಲಾವಣೆ ಅಗತ್ಯವಿದ್ದು, ಇದನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸುತ್ತಿದೆ. ಇಡೀ ಜಗತ್ತು ಇಂದು ಹಳ್ಳಿಯಾಗಿ ಪರಿವರ್ತನೆಯಾಗಿದ್ದು, ಕೃಷಿ ಮಾರುಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಅತ್ಯಂತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ದೇಶದಲ್ಲಿ 65 ಕೋಟಿ ಜನ ಕೃಷಿಯಲ್ಲಿ ತೊಡಗಿದ್ದು, ಈ ಪೈಕಿ 35 ಕೋಟಿ ಜನ ಕೃಷಿ ಕೂಲಿ ಕಾರ್ಮಿಕರು, ಬಡವರು, ತೀವ್ರ ಸಂಕಷ್ಟದಲ್ಲಿರುವವರಾಗಿದ್ದಾರೆ. ಎಪಿಎಂಸಿ ಕಾಯ್ದೆಯಡಿ ರೈತರು ಪಾವತಿಸಬೇಕಿದ್ದ ಸೆಸ್ ಅನ್ನು ಇದೀಗ ರದ್ದುಗೊಳಿಸಲಾಗಿದೆ. ರೈತರು ಎಪಿಎಂಸಿಯಿಂದ ಹೊರಗಡೆ, ದೇಶದ ಯಾವುದೇ ಭಾಗದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ. ಆನ್ಲೈನ್ ಮಾರುಕಟ್ಟೆ ಸಹ ವಿಸ್ತರಣೆಯಾಗಲಿದೆ ಎಂದು ವಿವೇಕ್ ರೆಡ್ಡಿ ಹೇಳಿದರು.




