Vijayapura

ಸಮರ್ಥ ಕರ್ನಾಟಕ ಕಟ್ಟಬೇಕಾಗಿದೆ: ಎಂ.ಬಿ.ಪಾಟೀಲ

ವಿಜಯಪುರ : 21 ನೇ ಶತಮಾನದ ಸವಾಲುಗಳಿಗೆ ತಕ್ಕಂತೆ ಸಮರ್ಥ ಕರ್ನಾಟಕವನ್ನು ಕಟ್ಟಬೇಕಾಗಿದೆ, ಈ ಕಾರ್ಯ ಸಮರ್ಥ ಭಾರತ ನಿರ್ಮಾಣಕ್ಕೆ ದಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಆಶಯ ವ್ಯಕ್ತಪಡಿಸಿದರು.
ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರ ಅಪೂರ್ವ ಕೊಡುಗೆ, ತ್ಯಾಗ ಬಲಿದಾನವನ್ನು ಸ್ಮರಿಸುವ ಜೊತೆಗೆ ಮುನ್ನಡೆಯಬೇಕಾದ ಆಶಯ, ವಿಜಯಪುರ ಜಿಲ್ಲೆಯ ಪ್ರಗತಿಯ ಪಕ್ಷಿನೋಟವನ್ನು ವಿವರಿಸುತ್ತಾ ಸಂದೇಶದುದ್ದಕ್ಕೂ ವಿವರಿಸಿದರು.
ವಂದೇ ಭಾರತ ಹಾಗೂ ಒಂದೇ ಭಾರತ ಎನ್ನುವ ಅಖಂಡತೆಯ ಕರೆ ಕೋಟಿ ಕೋಟಿ ಕಂಠಗಳಿಂದ ಮೊಳಗುವಂತಾಗಬೇಕು, ಈ ಏಕತೆಯ ಕೂಗು ನವಭಾರತ ನಿರ್ಮಾಣದ ಸುಭದ್ರ ಬುನಾದಿಗೆ ಅಡಿಗಲ್ಲು ಎಂದರು.
ಸ್ವಾತಂತ್ರ್ಯೋತ್ಸವದ ಪುಣ್ಯ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಎಲ್ಲ ಮಹನೀಯರನ್ನು ನೆನಪಿಸಿಕೊಳ್ಳಬೇಕಿದೆ, ಅಹಿಂಸೆ ಹಾಗೂ ಶಾಂತಿ ಎಂಬ ಅಸ್ತçಗಳಿಂದಲೇ ಮಹಾತ್ಮಾ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮುಂಚೂಣಿ ಪಾತ್ರ ನಿಭಾಯಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆಯೂ ಅನನ್ಯ, ಕಿತ್ತೂರ ರಾಣಿ ಚೆನ್ನಮ್ಮ, ಮೈಲಾರ ಮಹಾದೇವಪ್ಪ, ಸಂಗೊಳ್ಳಿ ರಾಯಣ್ಣ ಹೀಗೆ ಹಲವಾರು ಮಹನೀಯರನ್ನು ನಿತ್ಯ ನೆನಸಬೇಕು ಎಂದು ಕರೆ ನೀಡಿದರು.
ಹಿರಿಯರ ಅವಿರತ ನಿಸ್ವಾರ್ಥ ಹೋರಾಟದ ಸಿಹಿಫಲಗಳನ್ನು ನಾವು ಇಂದು ಸವಿಯುತ್ತಿದ್ದೇವೆ, ಸ್ವಾತಂತ್ರ್ಯನಂತರ ನಮ್ಮ ಭವ್ಯ ಭಾರತ ಅನೇಕ ಸಮಸ್ಯೆ ಎದುರಿಸಿದರೂ ಸಹ ಅವುಗಳನ್ನು ಮೆಟ್ಟಿ ನಿಂತು ಬಾಹ್ಯಾಕಾಶ, ಅಣುವಿಜ್ಞಾನ, ವೈದ್ಯಕೀಯ ಎಲ್ಲ ರಂಗದಲ್ಲಿ ಜಗತ್ತೇ ಬೆರಗಿನಿಂದ ನೋಡುವಂತಹ ವಿಕ್ರಮಗಳನ್ನು ಸಾಧಿಸಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರ ದಿವ್ಯ ಆಶಯ ಹಾಗೂ ಡಾ.ಬಿ.ಆರ್. ಅಂಬೇಡ್ಕರ ಅವರ ಸಮಾನತೆಯ ಕನಸನ್ನು ನನಸು ಮಾಡುವ ಸಂಕಲ್ಪವನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಭೂತನಾಳ ಕೆರೆ ಅಂಗಳಕ್ಕೆ ಸದಾ ಕಾಲ ನೀರು
ಭೂತನಾಳ ಕೆರೆಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಮುಳವಾಡ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ ಅಕ್ವಾಡಕ್ಟ್ನಿಂದ ಇನ್ನೊಂದು ಸಂಪರ್ಕವನ್ನು ಕಲ್ಪಿಸಿ, ಭೂತನಾಳ ಕೆರೆ ಅಂಗಳದಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಪರಿಸರ ರಕ್ಷಣೆಯ ಭಾಗವಾಗಿ ನಡೆಯುತ್ತಿದ್ದ ವೃಕ್ಷಾಥಾನ್ ಓಟದ ಸ್ಪರ್ಧೆಯನ್ನು ಪುನ: ಈ ವರ್ಷದಿಂದ ಆಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಓಟದಲ್ಲಿ ಪಾರಂಪರಿಕ ಸ್ಥಳಗಳ ಮಹತ್ವ ಮೂಡಿಸಿ ಪ್ರವಾಸೋದ್ಯಮಕ್ಕೂ ಪೂರಕವಾಗುವ ನಿಟ್ಟಿನಲ್ಲಿಯೂ ಕಾರ್ಯಕ್ರಮ ಸಂಯೋಜಿಸಲಾಗುವುದು ಎಂದು ಪ್ರಕಟಿಸಿದರು.
ರೈತರಿಗೆ ಪ್ರಮುಖವಾದ ಸೇವೆ ಒದಗಿಸುವ ಕಂದಾಯ ಇಲಾಖೆಯನ್ನು ಇನ್ನಷ್ಟೂ ಜನಸ್ನೇಹಿಯಾಗಿ ರೂಪಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 303 ಗ್ರಾಮ್-1 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, 273 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, 163 ಗ್ರಾಮಗಳಲ್ಲಿ ಯಶಸ್ವಿಯಾಗಿ ಸರ್ವೇ ಪೂರ್ಣಗೊಂಡಿದೆ ಎಂದು ವಿವರಿಸಿದರು.
ವಿದ್ಯುತ್ ವಿತರಣಾ ಜಾಲದಲ್ಲಿಯೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುತ್ತಿದ್ದು, ರೈತರ ನೀರಾವರಿ ಪಂಪಸೆಟ್ಗಳಿಗೆ ಏಳು ಗಂಟೆ ನಿರಂತರ 3ಫೇಸ್ ವಿದ್ಯುತ್ ಪೂರೈಕೆಗೆ ಸರ್ಕಾರ ಉದ್ದೇಶಿಸಿದೆ ಎಂದರು.

ಟಾಪ್-ಫೈವ್ ಸಂಕಲ್ಪ
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿಯೂ ಧೃಡ ಸಂಕಲ್ಪ ಮಾಡಲಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಟಾಪ್-ಫೈವ್ ಪಟ್ಟಿಯಲ್ಲಿ ವಿಜಯಪುರ ಶೈಕ್ಷಣಿಕ ಜಿಲ್ಲೆ ಇರುವಂತೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಪಾಟೀಲ ವಿವರಿಸಿದರು.
ಜಲ, ವೃಕ್ಷ ಹಾಗೂ ಶಿಕ್ಷಣ ಎಂಬ ತ್ರಿಮಂತ್ರಗಳೊಂದಿಗೆ ವಿಜಯಪುರ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ವಿಶೇಷ ಒತ್ತು ನೀಡಲು ಬದ್ಧ ಎಂದರು.


ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಾಹುಲ್ ಶಿಂಧೆ, ಎಸ್.ಪಿ. ಎಚ್.ಡಿ. ಆನಂದಕುಮಾರ, ಮಹಾನಗರ ಪಾಲಿಕೆ ಆಯುಕ್ತ ಬದರುದ್ದೀನ್ ಸೌದಾಗರ, ಡಿಯುಡಿಸಿ ವಿಜಯಕುಮಾರ ಮೆಕ್ಕಳಕಿ ಮೊದಲಾದವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button