ಹಣದ ಕೊರತೆಯಿಂದ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು: ಎಂ.ಬಿ.ಪಾಟೀಲ

ವಿಜಯಪುರ: ದೇಶದಲ್ಲಿ ಹಣದ ಕೊರತೆಯಿಂದಾಗಿ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಪವಿತ್ರ ಕ್ಷೇತ್ರವಾಗಿದೆ. ಜನರಿಗೆ ದೇವರ ನಂತರ ವೈದ್ಯರ ಮೇಲೆಯೇ ಹೆಚ್ಚು ವಿಶ್ವಾಸವಿದೆ. ವೈದ್ಯರು ಪ್ರೀತಿಯಿಂದ ಮಾತನಾಡಿದರೆ, ರೋಗಿಗಳು ಬೇಗನೆ ಗುಣಮುಖರಾಗುತ್ತಾರೆ. ಸರಕಾರ ಕೂಡ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ವಿಮೆ ಯೋಜನೆ ಜಾರಿಗೆ ಮಾಡುತ್ತಿವೆ. ಆರೋಗ್ಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ನಾನೂ ಕೂಡ ಸಾಧ್ಯವಿರುವ ಕಡೆ ನಾನು ಸಹಾಯ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ವೈದ್ಯಕೀಯ ಸಂಘ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ವೈದ್ಯರು ತಮಗೆ ಎದುರಾಗುವ ಸಮಸ್ಯೆಗಳು, ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸಿಗಬಹುದಾದ ಸೌಲಭ್ಯಗಳ ಕುರಿತು ಕಾಲಕಾಲಕ್ಕೆ ಆಯಾ ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ಮಾರ್ಗದರ್ಶನ ಮಾಡಬೇಕು. ಇದರಿಂದ ಸರಕಾರಗಳು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಹಾಯವಾಗುತ್ತದೆ.

ವೈದ್ಯಕೀಯ ಕ್ಷೇತ್ರವೂ ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿದೆ. ಈಗ ಹೊಸ ಆವಿಷ್ಕಾರವಾಗಿರುವ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಭವಿಷ್ಯದಲ್ಲಿ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಗತ್ಯ ಮತ್ತು ಬೇಡಿಕೆಗೆ ತಕ್ಕಂತೆ ವೈದ್ಯರೂ ಕೂಡ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ರೋಗಿಗಳ ಆರೋಗ್ಯದ ಹಿತರಕ್ಷಣೆಯ ಜೊತೆಗೆ ತಂತಮ್ಮ ಕುಟುಂಬಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಎರಡೂ ಜವಾಬ್ದಾರಿಗಳನ್ನು ಸಮಾನವಾಗಿ ನಿರ್ವಹಿಸಬೇಕು ಎಂದು ಸಚಿವರು ತಿಳಿಸಿದರು.

ಈ ಹಿಂದೆ ಉತ್ತಮ ಚಿಕಿತ್ಸೆಗಾಗಿ ಭಾರತೀಯರು ವಿದೇಶಗಳಿಗೆ ತೆರಳುತ್ತಿದ್ದರು. ಆದರೆ, ಈಗ ಭಾರತೀಯ ವೈದ್ಯರು ತಮ್ಮ ಸೇವೆಯ ಮೂಲಕ ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಭಾರತೀಯ ವೈದ್ಯರ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾಗಿದೆ. ವಿಜಯಪುರ ಐಎಂಯನ್ನು ನಾನು ಬಾಲ್ಯದಿಂದಲೇ ನೋಡುತ್ತ ಬಂದಿದ್ದು, ಅಂದಿನ ಹಿರಿಯ ವೈದ್ಯರು ಮತ್ತು ಅಧ್ಯಕ್ಷ ಡಾ. ಪ್ರೇಮಾನಂದ ಅಂಬಲಿ ಅವರು ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಸಂಸ್ಥೆ ಪ್ರಾರಂಭವಾದಾಗಿನಿಂದ ಈಗಿನವ ರೆಗೆ ಈ ಸಂಘಟನೆ ಇಷ್ಟೋಂದು ಸಾಧನೆ ಮಾಡಲು ಕೊಡುಗೆ ನೀಡಿರುವ ಎಲ್ಲ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಎಂ. ಬಿ. ಪಾಟೀಲ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಜಲಕ್ರಾಂತಿ ಮಾಡಿರುವ ಎಂ. ಬಿ. ಪಾಟೀಲ ಅವರು, ವೈದ್ಯರಿಗೂ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡೀನ್ ಡಾ. ಬಿ. ಎಸ್. ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ, ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ಡಾ. ಬಿ. ಸಿ. ಉಪ್ಪಿನ, ಡಾ. ಸಂಪತ ಗುಣಾರೆ, ಡಾ. ದಯಾನಂದ ಬಿರಾದಾರ, ಡಾ. ಎಂ. ಆರ್. ಗುಡದಿನ್ನಿ, ಡಾ. ಎಲ್. ಎಚ್. ಬಿದರಿ, ಡಾ. ಬಿ. ಸಿ. ಉಪ್ಪಿನ, ಡಾ. ಮಹಮ್ಮದ ಖುರೇಶಿ. ಡಾ. ಎಂ. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories