
ಕೊಡಗಿನಲ್ಲಿ ದಸರಾ ಸಂದರ್ಭ . ಡಿಜೆ. ಶಬ್ದಕ್ಕೆ ಹೈಕೋರ್ಟ್ ತಡೆ | ಮನುಷ್ಯರು ಸೇರಿ ಪ್ರಾಣಿ ಪಕ್ಷಿ ಸಂಕುಲಗಳ ಪ್ರಾಣಕ್ಕೂ ಕುತ್ತು
ಕೊಡಗಿನಲ್ಲಿ ಆಚರಿಸಲಾಗುವ ದಸರಾ ಉತ್ಸವದಲ್ಲಿ ಡಿಜೆ ಅಬ್ಬರಕ್ಕೆ ಇದೀಗ ರಾಜ್ಯ ಉಚ್ಚ ನ್ಯಾಯಾಲಯ ಕಡಿವಾಣ ಹಾಕಿದೆ. ದಸರಾ ಉತ್ಸವ ಸಂದರ್ಭದಲ್ಲಿ ಎದೆ ನಡುಗಿಸುವ ಡಿಜೆ ಶಬ್ದ ಮಾಲಿನ್ಯ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾದಾಗ ಇದೀಗ ಸೋಮವಾರಪೇಟೆ ನಿವಾಸಿ ಹೈ ಕೋರ್ಟ್ ವಕೀಲರು, ಪಬ್ಲಿಕ್ ವಾಯ್ಸ್ ಸಂಘಟನೆಯ ಪ್ರಮುಖರು ಆದ ಅಮೃತೇಶ್ ರವರು ಇತ್ತೀಚಿಗೆ ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಆದೇಶವನ್ನು ದಸರಾ ಸಂದರ್ಭ ಪಾಲಿಸದಿದ್ದರೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮುಖದಮೆ ದಾಖಲು ಮಾಡುವುದಾಗಿ ಹೇಳಿದ್ದರು.
ನಂತರ ಮಾಜಿ ಶಾಸಕರಾದ ಕೆ. ಜಿ.ಬೋಪಯ್ಯ ತೀವ್ರ ವಿರೋಧ ವ್ಯಕ್ತಪಡಿಸಿ ಡಿಜೆ ವಾದ್ಯಕ್ಕೆ ತಡೆ ಒಡ್ಡದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು ಇದರ ಹಿನ್ನೆಲೆಯಲ್ಲಿ ಅಕ್ಟೋಬರ್ 18ರಂದು ಅಮೃತೇಶ್ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದೀಗ ನ್ಯಾಯಾಲಯವು ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುವಂತೆ ಜಿಲ್ಲಾಡಳಿತಕ್ಕೆಸೂಚನೆ ನೀಡಿದೆ. ಡಿಜೆಗೆ ಕುಣಿಯುವುದು ನಮ್ಮ ಸಂಸ್ಕೃತಿ ಅಲ್ಲ ಇತ್ತೀಚಿಗೆ ದಸರಾ ಹಾಗೂ ಗೌರಿ ಗಣೇಶ ಉತ್ಸವದಲ್ಲಿ ಕೊಡಗಿನಲ್ಲಿ ಇದರ ಅಬ್ಬರ ಜಾಸ್ತಿಯಾಗಿದೆ ಇದರಿಂದ ಹಿರಿಯರಿಗೆ ಮಕ್ಕಳಿಗೆ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಪ್ರಾಣಿಗಳಿಗೆ ತೀವ್ರ ಸ್ವರೂಪದ ತೊಂದರೆಯಾಗುತ್ತಿರುವುದರಿಂದ ಇದನ್ನು ತಡೆಗಟ್ಟಲು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಅಮೃತೇಶ್ ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಆಚರಣೆಯಾಗುವ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾದಲ್ಲಿ ಈ ಬಾರಿ ಡಿಜೆ ಶಬ್ದಕ್ಕೆ ಬ್ರೇಕ್ ಬೀಳೋದಂತು ಖಂಡಿತವಾಗಿದೆ. ಕೊಡಗಿನ ಹಲವು ಸಾರ್ವಜನಿಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ, ಡಿಜೆ ಪರ ನಿಲ್ಲುವವರು ಒಮ್ಮೆ ದಸರಾ ಸಂದರ್ಭದಲ್ಲಿ ಡಿಜೆ ಮುಂಬಾಗ ನಿಂತು ಅದರ ಪರಿಣಾಮವನ್ನು ಅನುಭವಿಸಿದ್ದರೆ ಯಾರು ಕೂಡ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಹಲವರು ತಮ್ಮ ಅಭಿಪ್ರಾಯವನ್ನು ಚಾನೆಲ್ ಕೂರ್ಗ್ ನೊಂದಿಗೆ ವ್ಯಕ್ತಪಡಿಸಿದ್ದಾರೆ. ಕುಣಿಯಲು ಕೊಡಗಿನ ವಾದ್ಯಕಿಂತ ಮಿಗಿಲಾದ ವಾದ್ಯ ಮತ್ತುೊಂದಿಲ್ಲ ಹಿಂದೆ ನಮ್ಮ ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಪಾಲಿಸಿದಾಗ ಯಾವುದೇ ಸಮಸ್ಯೆ ಇರಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿದ್ದರಿಂದ ಈ ಎಲ್ಲಾ ಅನಾಹುತಗಳು ಆಗುತ್ತಿದೆ ಎಂದು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.




