
ಮಲ್ಪೆ: ಹಲವರ ಖಾತೆಯಿಂದ ಲಕ್ಷಾಂತರ ರೂಪಾಯಿ ವರ್ಗಾವಣೆ – ದೂರು ದಾಖಲು
ಮಲ್ಪೆ: ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿಯನ್ನು ಕದ್ದು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ (ಎಇಪಿಎಸ್) ಮೂಲಕ ಬ್ಯಾಂಕ್ ಖಾತೆಯಿಂದ ಹಣ ದೋಚಿರುವ ಪ್ರಕರಣ ಈಗಾಗಲೇ ಮಂಗಳೂರಿನಲ್ಲಿ ವರದಿಯಾಗಿರುವ ಬೆನ್ನಲ್ಲೇ ವಾರದ ಹಿಂದೆ ಮಲ್ಪೆಯಲ್ಲೂ ಹಲವು ಮಂದಿಯ ಖಾತೆಯಿಂದ ಹಣ ವರ್ಗಾವಣೆ ಯಾಗಿರುವ ವಿಷಯ ಈಗ ಬೆಳಕಿಗೆ ಬಂದಿದೆ.
ಜಾಗ ಖರೀದಿ ಸಂದರ್ಭ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿ ನೀಡಿದವರಿಗೆ ಈ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಮಲ್ಪೆಯ ರಮೇಶ್ ಮೆಂಡನ್ ಅವರ ಖಾತೆಯಿಂದ 10 ಸಾವಿರ ರೂ. ವರ್ಗವಣೆಯಾದ ಬಗ್ಗೆ ಅವರ ಮೊಬೈಲಿಗೆ ಸಂದೇಶ ಬಂದಿತ್ತು. ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನಲ್ಲಿ ವಿಚಾರಿಸಿದಾಗ ಅವರ ಬೆರಳು ಮುದ್ರೆ ಬಳಸಿ ಖಾತೆಯಿಂದ ಹಣ ಡ್ರಾ ಮಾಡಲಾಗಿದೆ ಎಂದು ಮ್ಯಾನೇಜರ್ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ರೀತಿ ಮಲ್ಪೆ ಹನುಮಾನ್ ನಗರದ ಧನಂಜಯ ಕಾಂಚನ್ ಅವರ ಪತ್ನಿ ಜಯಂತಿ ಅವರ ಖಾತೆಯಿಂದಲೂ ಹಣ ವರ್ಗಾವಣೆಯಾಗಿದೆ. ಅ. 19ರಂದು ಖಾತೆಯಲ್ಲಿ 24 ಸಾವಿರ ಇದ್ದು, ಸಂಜೆ 7 ಗಂಟೆ ವೇಳೆಗೆ 5 ಸಾವಿರ ರೂ. ಕಡಿತಗೊಂಡಿತ್ತು. ಮರುದಿನ ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಹಣ ವರ್ಗಾವಣೆಯಾಗಿರುವುದು ಖಚಿತವಾಯಿತು. ತತ್ಕ್ಷಣವೇ 1 ಸಾವಿರ ರೂ.ಗಳನ್ನು ಮಾತ್ರ ಆ ಖಾತೆಯಲ್ಲಿ ಉಳಿಸಿ ಉಳಿದ 18 ಸಾವಿರವನ್ನು ಅನ್ಯ ಖಾತೆಗೆ ವರ್ಗಾಯಿಸಿದರು. ಸ್ವಲ್ಪ ಹೊತ್ತಿನ ಬಳಿಕ ಅಲ್ಲಿ ಉಳಿಸಿದ್ದ 1 ಸಾವಿರವೂ ವರ್ಗಾವಣೆಗೊಂಡು ಬ್ಯಾಲೆನ್ಸ್ ಮೊತ್ತ ಶೂನ್ಯ ಎಂದು ತೋರಿಸುತ್ತಿತ್ತು. 1 ಸಾವಿರ ಕಡಿತಕ್ಕೆ ಯಾವುದೇ ಸಂದೇಶ ಕೂಡ ಬಂದಿಲ್ಲ ಎನ್ನುತ್ತಾರೆ ಧನಂಜಯ್.
ಇದೇ ವೇಳೆ ಪಾವಂಜಿಗುಡ್ಡೆಯ ದಿವಾಕರ್, ಹರೀಶ್ ಮತ್ತು ಇನ್ನೂ ಕೆಲವು ಮಂದಿಯ ಖಾತೆಯಿಂದಲೂ ಹಣ ಕಡಿತವಾಗಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅವರೆಲ್ಲ ಸಂಬಂಧಪಟ್ಟ ಬ್ಯಾಂಕ್, ಪೊಲೀಸ್ ಠಾಣೆ, ಉಡುಪಿ ಸೈಬರ್ ಕ್ರೈಮ್ ವಿಭಾಗಕ್ಕೂ ದೂರು ನೀಡಿದ್ದಾರೆ.




