
ಮನೆಗಳಲ್ಲಿ ನಾಯಿ ಸಾಕಲು ಶೀಘ್ರವೇ ಹೊಸ ಮಾರ್ಗಸೂಚಿ
ಬೆಂಗಳೂರು: ನಾಯಿ ಇಷ್ಟವೆಂದು ಬೇಕಾಬಿಟ್ಟಿ ಸಾಕುವುದು ಇನ್ನು ಮುಂದೆ ಸಾಧ್ಯವಾಗದು. ಶ್ವಾನ ಸಾಕುವುದಕ್ಕಾಗಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶು ಸಂಗೋಪನೆ ವಿಭಾಗವು ಪ್ರತ್ಯೇಕ ಮಾರ್ಗಸೂಚಿ ಜಾರಿಗೆ ತಂದು ಅನುಷ್ಠಾನಗೊಳಿಸಲು ಮುಂದಾಗಿದೆ. ಹೊಸ ನಿಯಮಗಳೂ ಈ ವರ್ಷಾಂತ್ಯದೊಳಗೆ ಜಾರಿಯಾಗುವ ಸಾಧ್ಯತೆ ಇದೆ.
ಒಂದು ಕುಟುಂಬ ಗರಿಷ್ಠ ಎಷ್ಟು ಶ್ವಾನಗಳನ್ನು ಸಾಕಬಹುದು ? ಮಲ-ಮೂತ್ರ ವಿಸರ್ಜನೆಗೆ ಶ್ವಾನವನ್ನು ಎಷ್ಟು ಗಂಟೆಗೆ ಮನೆಯಿಂದ ಹೊರಗೆ ಕರೆದೊಯ್ಯಬೇಕು? ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ಯಾವ್ಯಾವ ಕ್ರಮ ಕೈಗೊಳ್ಳಬೇಕು ಇತ್ಯಾದಿ ಅಂಶಗಳನ್ನು ಮಾರ್ಗ ಸೂಚಿ ಒಳಗೊಳ್ಳಲಿದೆ.
ಶ್ವಾನ ಸಾಕುವುದು ಶ್ರೀಮಂತಿಕೆಯ ಸಂಕೇತ ಒಂದೆಡೆಯಾದರೆ, ಒತ್ತಡ ನಿವಾರಣೆಗೆ ಮಾರ್ಗವೂ ಆಗಿದೆ. ಹೀಗಾಗಿ ನಗರದಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ರೂ.ನಿಂದ ಹಿಡಿದು ಲಕ್ಷಾಂತರ ರೂಪಾಯಿ ಕೊಟ್ಟು ನಾಯಿ ಕೊಳ್ಳುವವರೂ ಇದ್ದಾರೆ. ನಾಯಿ ಬೊಗಳುವುದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುವುದು ಸಾಮಾನ್ಯವಾಗಿದೆ. ಹಲವರು ರಸ್ತೆ ಬದಿಯಲ್ಲಿ ನಾಯಿಗಳ ಮಲ-ಮೂತ್ರ ಮಾಡಿಸುವುದು ಸಮಸ್ಯೆ ಸೃಷ್ಟಿಸುತ್ತಿದೆ. ಇದರಿಂದ ನಗರದ ಸೌಂದರ್ಯವೂ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿಶ್ವಾನ ಸಾಕಣೆಗೆ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಪಶು ಇಲಾಖೆ ಜಂಟಿ ನಿರ್ದೇಶಕ ಡಾ. ರವಿಕುಮಾರ್.




