
ಬ್ಯಾಂಕ್ ನಿಂದ ಪಡೆದಿದ್ದ ಸಾಲವನ್ನು ತೀರಿಸಲೆಂದು ಇನ್ನೊಂದು ಬ್ಯಾಂಕ್ ನಲ್ಲಿ ಚಿನ್ನಾಭರಣವನ್ನು ಅಡಮಾನವಿಟ್ಟು ದೊರೆತ ರೂ.2.09 ಲಕ್ಷ ಹಣವನ್ನು ಬೈಕ್ ನಲ್ಲಿ ಸಾಗಿಸುತ್ತಿದ್ದ ಕೃಷಿಕನ ಗಮನವನ್ನು ಖದೀಮರು ಬೇರೆಡೆ ಸೆಳೆದು ದೋಚಿರುವ ಘಟನೆ ಇಂದು ಕುಶಾಲನಗರದಲ್ಲಿ ನಡೆದಿದೆ. ಬಿಟ್ಟದಪುರ ಆನಂದ ನಗರದ ಕೃಷಿಕ ವೈಲೇಶ್ ಎಂಬುವವರು ಕೆನರಾ ಬ್ಯಾಂಕ್ ನಲ್ಲಿ ಕೃಷಿ ಸಾಲ ಪಡೆದಿದ್ದರು. ಈ ಸಾಲವನ್ನು ಮರುಪಾವತಿಸಲೆಂದು ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಚಿನ್ನಾಭರಣವನ್ನಿಟ್ಟು ರೂ. 2.09 ಲಕ್ಷ ಹಣವನ್ನು ಸಾಲ ಪಡೆದಿದ್ದರು. ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲ್ಬಾಗದಲ್ಲಿರುವ ಬ್ಯಾಗ್ ನಲ್ಲಿ ಹಣವನ್ನು ಇಟ್ಟು ತೆರಳುತ್ತಿದ್ದಾಗ ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಬೈಕ್ ನಲ್ಲಿ ಬಂದ ನಾಲ್ವರು ಅಪರಿಚಿತರು ವೈಲೇಶ್ ಬಳಿ ಜೇಬಿನಿಂದ ಹಣ ಬೀಳುತ್ತಿದೆ ಎಂದೇಳಿ ಅವರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ. ಇತ್ತ ಅವರ ಮಾತನ್ನು ನಂಬಿದ ವೈಲೇಶ್ ಬೈಕ್ ನಿಂದ ಕೆಳಗಿಳಿದು ರಸ್ತೆಯಲ್ಲಿ ಬಿದ್ದ ಅಲ್ಪ ಮೊತ್ತದ ನೋಟ್ ಅನ್ನು ಎಕ್ಕಿಕೊಳ್ಳುತ್ತಿದ್ದಾಗ ಅತ್ತ ಖದೀಮರು ಬೈಕ್ ನಲ್ಲಿದ್ದ 2.09 ಲಕ್ಸ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ತಾನು ಮೋಸ ಹೋಗಿರುವುದನ್ನು ಅರಿತ ವೈಲೇಶ್ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪುಕಾರು ನೀಡಿದ್ದು, ಚೋರರ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಪೊಲೀಸ್ ಸೂಚನೆ: ಸಾರ್ವಜನಿಕರು ಬ್ಯಾಂಕ್ ನಿಂದ ಹಣವನ್ನು ಪಡೆದು ತೆರಳುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ತಮ್ಮನ್ನು ಹಿಂಬಾಲಿಸಿ ತಮ್ಮ ಗಮನವನ್ನು ಬೇರೆಡೆ ಸೆಳೆದು ಹಣವನ್ನು ಕಳವು ಮಾಡಿರುವ ಬಗ್ಗೆ ಸುತ್ತ ಮುತ್ತಲಿನ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ. ಆದ್ದರಿಂದ ಬ್ಯಾಂಕ್ ವಹಿವಾಟು ನಡೆಸಿ ಹಣವನ್ನು ಪಡೆದು ತೆರಳುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ / ತುರ್ತು ಸಹಾಯ ವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ KSP ತಂತ್ರಂಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.




