Featured StoryVijayapura

ರಾಜ್ಯದಲ್ಲಿ ಭೀಕರ ಬರ ಇದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಕೇಂದ್ರದ ವಿರುದ್ಧ ಹರಿಹಾಯ್ದ ಎಂಬಿಪಿ

ವಿಜಯಪುರ : ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇದ್ದರೂ ಸಹ ಕೇಂದ್ರ ಸರ್ಕಾರ ಕಿಂಚಿತ್ತೂ ಸ್ಪಂದನೆ ಮಾಡುತ್ತಿಲ್ಲ, ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ವಿಜಯಪುರ ಜಿಲ್ಲೆಯ ವಿವಿದ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರದ ವಿಷಯವಾಗಿ ಯಾವ ಜವಾಬ್ದಾರಿ ನಿಭಾಯಿಸಿಲ್ಲ, ಇದು ರೈತ ವಿರೋಧಿ ನೀತಿಯಾಗಿದೆ, ಆದರೆ ಕೇಂದ್ರದಲ್ಲಿ 27 ಸಂಸದರನ್ನು ಹೊಂದಿರುವ ಸಂಸದರ ಪೈಕಿ ಯಾರೂ ಕೂಡಾ ಬರದ ಬಗ್ಗೆ ಮಾತನಾಡುತ್ತಿಲ್ಲ, ರಾಜ್ಯದ ಸಂಸದರು, ಕೇಂದ್ರ ಸರಕಾರ, ಪ್ರಧಾನಿ ಹಾಗೂ ಸಚಿವರನ್ನು ಭೇಟಿ ಮಾಡುತ್ತಿಲ್ಲ. ಅವರು ಇವರಿಗೆ ಸಮಯವೂ ಕೊಡುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಕೇಂದ್ರದಿಂದ ಒಂದು ಬಿಡಿಗಾಸು ಪರಿಹಾರ ಬಂದಿಲ್ಲ, ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿದರೂ ಆದರೆ ವರದಿ ಕೊಟ್ಟಿದ್ದಾರೋ ಇಲ್ಲವೋ ಅದು ಗೊತ್ತಿಲ್ಲ ಎಂದರು.

ಬರ ನಿರ್ವಹಣೆ ಪ್ರತಿಯೊಬ್ಬರ ಜವಾಬ್ದಾರಿ. ಅಧಿಕಾರದಲ್ಲಿ ಯಾರೋ ಇದ್ದರೂ, ತಕ್ಷಣ ರೈತರ ನೆರವಿಗೆ ಬರಬೇಕು. ಈ ವಿಷಯದಲ್ಲಿ ರಾಜ್ಯಕ್ಕಿಂತ ಕೇಂದ್ರ ಸರಕಾರದ ಜವಾಬ್ದಾರಿ ಹೆಚ್ಚು ಎಂಬುದನ್ನು ಮರೆಯಬಾರದು ಎಂದರು.

ಜಿಲ್ಲೆಯಲ್ಲಿರುವ 10 ಸಾವಿರ ಹೆಕ್ಟೇರ್ ಲಿಂಬೆ ಪ್ರದೇಶದ ಪೈಕಿ ಅಂದಾಜು 7.5 ಕೋಟಿ ಹೆಕ್ಟೇರ್ ಲಿಂಬೆ ಹಾನಿಯಾಗಿದೆ. ಈಗಾಗಲೇ ಜಿಲ್ಲಾಡಳಿತ ವರದಿ ಕೂಡ ಒಪ್ಪಿಸಿದೆ. ಆ ಪ್ರಕಾರ ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು. ಕೇಂದ್ರದ ಎನ್.ಡಿ.ಆರ್.ಎಫ್ ನಿಯಮಾವಳಿ ಕೂಡ ಬದಲಾಗುವ ಅವಶ್ಯಕತೆ ಇದೆ ಎಂದರು.
ರೈತರು ಸೂರ್ಯಪಾನಕ್ಕೆ ಪ್ರತಿ ಎಕರೆಗೆ ಹತ್ತು ಸಾವಿರ ಖರ್ಚು ಮಾಡಿದ್ದಾರೆ. ಆದರೆ ಪರಿಹಾರ ಮೂರೂವರೆ ಸಾವಿರ ಪರಿಹಾರ ಸಿಗಲಿದೆ. ಲಿಂಬೆ ಬೆಳೆಗಾರರ ಸ್ಥಿತಿ ಕೂಡ ಭಿನ್ನವಾಗಿಲ್ಲ. ಮೂರು ಲಕ್ಷ ಎಕರೆ ತೊಗರಿ ನಾಶವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಅವಕಾಶ ಕಲ್ಪಿಸಲಾಗುತ್ತಿದೆ. ಸರಕಾರ ಕ್ಯಾಬಿನೆಟ್ನಲ್ಲೂ ನಿರ್ಧಾರ ಮಾಡಿದ್ದು, ಉದ್ಯೋಗ ಖಾತ್ರಿ ಮಾನವ ದಿನಗಳ ಸೃಜನೆಗೆ ಲಿಮಿಟ್ ನೀಡಿಲ್ಲ. ಎಷ್ಟು ಜನ ಬಂದರೂ ಕೆಲಸ ನೀಡಬೇಕೆಂದು ತಿಳಿಸಲಾಗಿದೆ ಎಂದರು.
ಇಡೀ ರಾಜ್ಯ ತೀವ್ರ ಬರದಿಂದ ತತ್ತರಿಸಿದ್ದರಿಂದ ಈಗಾಗಲೇ ರಾಜ್ಯ ಸರಕಾರ ರಾಜ್ಯದ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಹೀಗಾಗಿ ಸರಕಾರ ಕುಡಿಯುವ ನೀರು ಸೇರಿದಂತೆ ಪ್ರತಿಯೊಂದಕ್ಕೂ ಜಿಲ್ಲಾಕಾರಿ ಪಿಡಿ ಖಾತೆಯಲ್ಲಿ ಹಣ ಠೇವಣಿ ಮಾಡಲಾಗಿದೆ ಎಂದು ವಿವರಿಸಿದರು.

ಇನ್ನೂ ಅಗತ್ಯ ಬಿದ್ದರೆ, ನೂರು ಕೋಟಿಯವರೆಗೆ ಹಣ ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸರಕಾರದ ಸ್ಪಷ್ಟ ಸೂಚನೆಯಿರುವುದರಿಂದ ಬಹುತೇಕ ಇಲಾಖೆಗಳು ಬರ ಮಾಹಿತಿ ನೀಡಿರುವೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button