Featured StoryBidar

ಬರಕ್ಕೆ ತತ್ತರಿಸಿದ ಗೇಣಿ ರೈತರು | ಸಿದ್ದು ಸರ್ಕಾರ ಕೈ ಹಿಡಿಯುತ್ತಾ ?

 

ಬೀದರ್: ‘ಒಂದು ವರ್ಷಕ್ಕೆ ಎಕರೆಗೆ ಹತ್ತು ಸಾವಿರ ರೂಪಾಯಿಯಂತೆ 20 ಎಕರೆಗೆ 2 ಲಕ್ಷ ಕೊಟ್ಟು ಲೀಸ್‌ಗೆ ಹಾಕಿಕೊಂಡೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ್ದ ಹತ್ತಿ, ತೊಗರಿ ಬೆಳೆಗಳು ನೀರಿಲ್ಲದೆ ಬಾಡುತ್ತಿವೆ. ಹಾಕಿದ ದುಡ್ಡು ಕೈಸೇರುತ್ತೋ ಎಲ್ಲವೋ ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ಚಿಂತಾಕಿ ಸಮೀಪದ ಕರಂಜಿ ಕೆ ಗ್ರಾಮದ ರೈತ ರಾಜಕುಮಾರ್ ಕೋಳಿ

‘₹ 4 ಲಕ್ಷಕ್ಕೆ 40 ಎಕರೆ ಜಮೀನು ಲೀಸ್ ಪಡೆದು, ಬಿತ್ತನೆಗಾಗಿ ಖರ್ಚು ಮಾಡಿದಷ್ಟು ಫಸಲು ಕೈಸೇರುವ ನಿರೀಕ್ಷೆಯಿದೆ. ಸ್ವಂತ ಮೂರು ಎಕರೆ ಜಮೀನಿನಲ್ಲಿನ ಬೆಳೆಯ ಪರಿಸ್ಥಿತಿಯೂ ಇದೇ ರೀತಿಯಲ್ಲಿದೆ. ₹ 4 ಲಕ್ಷ ಸಾಲ ಹೇಗೆ ತೀರಿಸುವುದು’ ಎಂದು ರೈತ ಸಹೋದರರಾದ ಸುನಿಲ ಮತ್ತು ಅನಿಲ್ ಕಲವಳಗೊಂಡರು.

ಬದುಕು ಕಟ್ಟಿಕೊಳ್ಳಲು ಹಣ ಕೊಟ್ಟು ಬೇರೊಬ್ಬರ ಜಮೀನು ಗುತ್ತಿಗೆ ಪಡೆದ ಗೇಣಿ ರೈತರು ಬರದ ಹೊಡೆತಕ್ಕೆ ಸಿಲುಕಿದ್ದಾರೆ. ಸಾಲ ತಂದು ಲೀಸ್ ಹಾಕಿಕೊಂಡು, ಫಸಲು ಬಾರದೆ ಸಾವಿರಾರು ರೈತರು ದಿವಾಳಿಯತ್ತ ಸಾಗುತ್ತಿದ್ದಾರೆ.

ಮಳೆಯ ವೈಫಲ್ಯದಿಂದ ಮುಂಗಾರು ಬೆಳೆಗಳು ಹಾಳಾಗಿದ್ದು ಸಾಲದ ಶೂಲ ಹೆಗಲೇರುವಂತೆ ಮಾಡಿದೆ. ಚಿಂತಾಕಿ ವಲಯದ ಸಣ್ಣ, ಅತಿ ಸಣ್ಣ ರೈತರು ಹಾಗೂ ಭೂರಹಿತ ಕೃಷಿ ಕಾರ್ಮಿಕರು ಲೀಸ್ ಉಳುಮೆಗೆ ಮುಂದಾಗಿ ಈ ವರ್ಷ ಕೈ ಸುಟ್ಟುಕೊಂಡಿದ್ದಾರೆ.

ಒಕ್ಕಲುತನದ ಸಹವಾಸವೇ ಬೇಡ ಎಂಬ ಹತಾಶೆಯ ಮಾತುಗಳು ರೈತರಿಂದ ಕೇಳಿ ಬರುತ್ತಿವೆ. ‘ಜಮೀನಿನ ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ವರ್ಷಕ್ಕೆ ಪ್ರತಿ ಎಕರೆಗೆ ₹ 10ರಿಂದ ₹ 15 ಸಾವಿರ ಕೊಟ್ಟು ಬೇಸಾಯ ಮಾಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ರೈತರನ್ನು ದುಃಸ್ವಪ್ನದಂತೆ ಕಾಡುತ್ತಿದೆ’ ಎಂದು ರೈತರು ‘THG ಕನ್ನಡ’ಗೆ ಅಳಲು ತೋಡಿಕೊಂಡರು.

ಹಿಂಗಾರಿನ ಜೋಳದ ಬೆಳೆಯಲ್ಲಿಯೂ ನಿರೀಕ್ಷಿಸಿದಷ್ಟು ಫಸಲು ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಬರದ ದವಡೆಗೆ ಸಿಲುಕಿ ಗುಳೆ ಹೋಗುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ರೈತರು. ಗೇಣಿ ರೈತರಿಗೆ ಈ ಬಾರಿ ಬರಗಾಲ ಶಾಪವಾಗಿ ಪರಿಣಮಿಸಿದೆ. ರೈತರ ಸಂಕಷ್ಟವನ್ನು ಹಿಗ್ಗಿಸಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಮಾಡಿದ ಖರ್ಚು ವಾಪಸ್ ಬರುತ್ತಿಲ್ಲ. ಸರ್ಕಾರ ಗೇಣಿ ರೈತರ ನೆರವಿಗೆ ಬರಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಹನಮಂತ ದೇಶಮುಖ
THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button