
ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವೇದಿಕೆ: ಪ್ರಭು ಚವ್ಹಾಣ
—
ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಸೂಪ್ತವಾಗಿ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಔರಾದ(ಬಿ) ವತಿಯಿಂದ ಪಟ್ಟಣದ ಬಸವನಗಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹೆಚ್ಚಿನ ಸಮಯವನ್ನು ಶಾಲೆಯಲ್ಲಿ ಕಳೆಯುವುದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಶಿಕ್ಷಕರು ಸುಲಭವಾಗಿ ಗುರುತಿಸಬಹುದು. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಶಿಕ್ಷಕರು ಸಹಕರಿಸಬೇಕು. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಕ್ಕಳನ್ನು ಹುರಿದುಂಬಿಸುವ ಕೆಲಸವನ್ನು ಮಾಡಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ನೆರವಾಗಬೇಕೆಂದು ತಿಳಿಸಿದರು.
ಕ್ಷೇತ್ರದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ಶಾಲೆಗಳಿಂದ ಬೇಡಿಕೆಗಳನ್ನು ಪಡೆದು ಹಂತ ಹಂತವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿದ್ದು, ಫಲಿತಾಂಶ ಸುಧಾರಿಸಲು ಅಧಿಕಾರಿಗಳು ಮತ್ತು ಶಿಕ್ಷಕರು ಇನ್ನಷ್ಟು ಪ್ರಯತ್ನ ವಹಿಸಬೇಕು. ಮಕ್ಕಳು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಔರಾದ ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ತಹಶೀಲ್ದಾರ ಮಲಶೆಟ್ಟಿ ಚಿದ್ರೆ, ಕಮಲನಗರ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ, ಬಿಆರ್ಸಿ ಪ್ರಕಾಶ ರಾಠೋಡ, ರಾಮಶೆಟ್ಟಿ ಪನ್ನಾಳೆ ಹಾಗೂ ಇತರರಿದ್ದರು




