
ಧರ್ಮಸಿಂಗ್ ಸ್ಮಾರಕ ಟ್ರೋಫಿ ತನ್ನದಾಗಿಸಿಕೊಂಡ ಕೊಳಾರ ಕ್ರಿಕೆಟ್ ತಂಡ
ಬೀದರ್: ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಸ್ಮಾರಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಕೊಳಾರ ತಂಡ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚಿಟ್ಟಾ ತಂಡದ ವಿರುದ್ಧ ಕೊಳಾರ ತಂಡ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೊಳಾರ ತಂಡ 10 ಓವರ್ಗಳಲ್ಲಿ 126 ರನ್ ಗಳಿಸಿತು. ಚಿಟ್ಟಾ ಚೇಸ್ ಮಾಡಲು ಎಡವಿ ಸೋಲೊಪ್ಪಿಕೊಂಡಿತು. ಕೊಳಾರ ತಂಡಕ್ಕೆ ಟ್ರೋಫಿ, ₹50 ಸಾವಿರ ನಗದು ನೀಡಲಾಯಿತು.
ಆಲ್ರೌಂಡರ್ ಆಟ ಪ್ರದರ್ಶಿಸಿದ ಆಟಗಾರ ಅಕ್ಷಯ್ ಗುಪ್ತಾ ಸರಣಿ ಶ್ರೇಷ್ಠ, ಸಚಿನ್ ಶ್ರೇಷ್ಠ ಬ್ಯಾಟ್ಸ್ಮ್ಯಾನ್ ಪುರಸ್ಕಾರಕ್ಕೆ ಪಾತ್ರರಾದರು. ಟ್ರೋಫಿ ಪ್ರದಾನ ಮಾಡಿ ಮಾತನಾಡಿದ ಮುಖಂಡ ಚಂದ್ರಾ ಸಿಂಗ್,‘ಗ್ರಾಮೀಣ ಪ್ರದೇಶದಲ್ಲಿರುವ ಕ್ರಿಕೆಟ್ ಆಟಗಾರರನ್ನು ಗುರುತಿಸಿ ಅವರಲ್ಲಿರುವ ಪ್ರತಿಭೆ, ಕ್ರೀಡಾ ಕೌಶಲವನ್ನು ಪ್ರೋತ್ಸಾಹಿಸಲು ಈ ಟೂರ್ನಿ ಆಯೋಜಿಸಲಾಗಿತ್ತು. ಏಳು ವರ್ಷಗಳಿಂದ ಬೀದರ್ ದಕ್ಷಿಣ ಕ್ಷೇತ್ರದ ತಂಡಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದರು. ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಗೌಸೋದ್ದಿನ್, ನಾರಾಯಣ ಭಂಗಿ ಹಾಗೂ ಇತರರು ಹಾಜರಿದ್ದರು
THG ಬೀದರ್




