Featured StoryNational

ಭಾರತ-ಪಾಕ್ ನಡುವೆ ಮಾತುಕತೆ ನಡೆಯದಿದ್ದರೆ ಗಾಝಾ, ಫೆಲೆಸ್ತೀನ್ ಸ್ಥಿತಿ ಎದುರಾಗಬಹುದು: ಫಾರೂಕ್ ಅಬ್ದುಲ್ಲಾ ಕಳವಳ

ಹೊಸದಿಲ್ಲಿ: ಕಾಶ್ಮೀರದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪಾಕಿಸ್ತಾನದ ಜೊತೆ ಮಾತುಕತೆ ನಡೆಸದ ಕಾರಣಕ್ಕೆ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಹಾಗೂ ಶ್ರೀನಗರ ಸಂಸದ ಫಾರೂಕ್ ಅಬ್ದುಲ್ಲಾ ಅವರು, “ಮಾತುಕತೆಗಳು ಆರಂಭಗೊಳ್ಳದಿದ್ದರೆ ಗಾಝಾದಲ್ಲಿನ ಸ್ಥಿತಿಯನ್ನೇ ನಾವು ಎದುರಿಸಬೇಕಾಗಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಭಾರತ-ಪಾಕಿಸ್ತಾನ ನಡುವಿನ ಸಂಬಂಧಗಳ ಕುರಿತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ “ನಾವು ನಮ್ಮ ಸ್ನೇಹಿತರನ್ನು ಬದಲಿಸಬಹುದು, ಆದರೆ ನಮ್ಮ ನೆರೆಹೊರೆಯವರನ್ನಲ್ಲ” ಎಂದು ಉಲ್ಲೇಖಿಸಿ ಯುದ್ಧವು ಈಗ ಆಯ್ಕೆಯಲ್ಲ ಮತ್ತು ಮಾತುಕತೆಗಳ ಮೂಲಕವೇ ವಿಷಯಗಳನ್ನು ಬಗೆಹರಿಸಬೇಕು ಎಂದು ಪ್ರಧಾನಿ ಮೋದಿಯವರೂ ಹೇಳಿದ್ದರು. ಆದರೆ ಮಾತುಕತೆ ಎಲ್ಲಿದೆ? ನವಾಝ್ ಶರೀಫ್ ಪಾಕಿಸ್ತಾನದ ಪ್ರಧಾನಿಯಾಗುವುದರಲ್ಲಿದ್ದಾರೆ ಮತ್ತು ತಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಆದರೆ ಮಾತುಕತೆಗೆ ನಾವು ಸಿದ್ಧರಿಲ್ಲದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅವರು, ‘ನಾವು ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳದಿದ್ದರೆ ಇಸ್ರೇಲ್ ನಿಂದ ಬಾಂಬ್ ದಾಳಿಗೆ ತುತ್ತಾಗಿರುವ ಗಾಝಾ ಮತ್ತು ಫೆಲೆಸ್ತೀನ್ ಸ್ಥಿತಿಯನ್ನೇ ನಾವು ಎದುರಿಸಲಿದ್ದೇವೆ” ಎಂದರು.

ಕಳೆದೊಂದು ವಾರದಿಂದ ಜಮ್ಮು-ಕಾಶ್ಮೀರದಲ್ಲಿ ಸರಣಿ ಅನಪೇಕ್ಷಿತ ಘಟನೆಗಳ ಹಿನ್ನೆಲೆಯಲ್ಲಿ ಅಬ್ದುಲ್ಲಾರ ಈ ಹೇಳಿಕೆ ಹೊರಬಿದ್ದಿದೆ. ಈ ಅವಧಿಯಲ್ಲಿ ಪೂಂಛ್ನಲ್ಲಿ ಭಯೋತ್ಪಾದಕರ ಹೊಂಚುದಾಳಿಯಲ್ಲಿ ಐವರು ಯೋಧರು ಬಲಿಯಾಗಿದ್ದಾರೆ,ಬಾರಾಮುಲ್ಲಾದ ಮಸೀದಿಯಲ್ಲಿ ನಿವೃತ್ತ ಪೋಲಿಸ್ ಅಧಿಕಾರಿಯೋರ್ವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ, ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ ಮೂವರು ನಾಗರಿಕರು ಬಳಿಕ ನಿಗೂಢ ಸಾವನ್ನಪ್ಪಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button