
ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗ ಎಸ್ಪಿಗೆ ದೂರು
ಉಡುಪಿ, ಡಿ.27: ಮುಸ್ಲಿಂ ಸಮುದಾಯದ ವಿರುದ್ಧ ಕೋಮು ಪ್ರಚೋದಕ ಹಾಗು ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿ ಧರ್ಮಗಳ ನಡುವೆ ದ್ವೇಷ ಬಿತ್ತುವ ಯತ್ನ ನಡೆಸಿದ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗವು ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಅವರಿಗೆ ಮನವಿ ಸಲ್ಲಿಸಿತು.
ಶ್ರೀರಂಗಪಟ್ಟಣದಲ್ಲಿ ನಡೆದ ಹನುಮಮಾಲೆ ಸಂಕೀರ್ತನಾ ಯಾತ್ರೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಮುಸ್ಲಿಮ್ ಸಮುದಾಯವನ್ನು ಮತ್ತು ಮಹಿಳೆಯರನ್ನು ಅತ್ಯಂತ ಕೀಳು ಭಾಷೆ ಉಪಯೋಗಿಸಿ ನಿಂದಿಸಿದ್ದು, ಧರ್ಮಗಳ ಮಧ್ಯೆ ಧ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಇವರು ಮಹಿಳೆಯರ ಖಾಸಗಿ ವಿಷಯವನ್ನು ಹೀಯಾಳಿಸುತ್ತಾ ಅಶ್ಲೀಲವಾಗಿ ನಿಂದಿಸಿ ಇಡೀ ಸ್ತ್ರೀ ಕುಲವನ್ನೆ ಅವಮಾನಿಸಿದ್ದಾರೆ.
ಅದಲ್ಲದೇ ಸಂವಿಧಾನ ಕೊಟ್ಟ ಧಾರ್ಮಿಕ ಸ್ವಾತಂತ್ರ್ಯದ ಅನುಗುಣವಾಗಿ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರದ ಕುರಿತು ಆಧಾರ ರಹಿತವಾಗಿ ಮಾನ ಹಾನಿಕಾರ ಹೇಳಿಕೆ ನೀಡಿರುವುದಲ್ಲೇ ಇಡೀ ಮುಸ್ಲಿಂ ಸಮುದಾಯ ಮತ್ತು ಮಹಿಳೆಯರ ಕುರಿತು ದ್ವೇಷವನ್ನು ಹರಡಿದ್ದಾರೆ. ಇದು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಗಂಭೀರ ಪ್ರಕರಣವಾಗಿದೆ. ಆದುದರಿಂದ ಯಾವುದೇ ಒತ್ತಡಕ್ಕೆ ಮಣಿಯದೇ ಅವರ ವಿರುದ್ಧ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.
ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿರುವ ದೊಡ್ಡ ಇತಿಹಾಸವಿರುವ ಕಲ್ಲಡ್ಕ ಭಟ್ ಕಳೆದ ಎರಡು ದಶಕಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ಇವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಕೋಮು ಪ್ರಚೋದನೆಗೆ ಪ್ರೋತ್ಸಾಹ ನೀಡಿದಂತಾಗುತ್ತಿದೆ. ಆದುದರಿಂದ ಅವರ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೇಂದು ಒಕ್ಕೂಟ ಮನವಿಯಲ್ಲಿ ಆಗ್ರಹಿಸಿದೆ.
ನಿಯೋಗದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಅಬೂಬಕ್ಕರ್ ನೇಜಾರು, ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಜಿಲ್ಲಾ ಉಪಾಧ್ಯಕ್ಷ ಸಲಾವುದ್ದೀನ್, ಉಡುಪಿ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ಇರ್ಷಾದ್ ಉಪಸ್ಥಿತರಿದ್ದರು




