Uttara KannadaFeatured Story

ಕಾರವಾರ ಸರ್ವರುತು ಬಂದರಿನ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ

ಕಾರವಾರ : ಸರ್ವ ಋತು ಬಂದರು ಎಂದೇ ಹೆಸರಾದ ಕಾರವಾರ ವಾಣಿಜ್ಯ ಬಂದರಿಗೆ
ಬರುವ ವಾಣಿಜ್ಯ ಹಡಗುಗಳ ಸಮುದ್ರ ಮಾರ್ಗದ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಕಳೆದ ಐದು ವರ್ಷಗಳ ಹಿಂದೆ ನಡೆದಿದ್ದ ಹೂಳೆತ್ತುವ ಕಾರ್ಯ ಮತ್ತೆ ಪ್ರಾರಂಭವಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಡಾಂಬರು , ರಾಕ್ ಪಾಸ್ಪೆಟ್ , ಅಕ್ಕಿ ,ಗೋಧಿ ,ಸಕ್ಕರೆ, ರಸ ಗೊಬ್ಬರ ಹೊತ್ತು ತರುವ ಹಡಗುಗಳು ಸಂಚರಿಸುವ ಮಾರ್ಗ, ಹಡಗು ಲಂಗರು ಹಾಕುವ ಧಕ್ಕೆ ಪ್ರದೇಶದ ಆಳ ಹೆಚ್ಚಿಸುವ ನಿಟ್ಟಿನಲ್ಲಿ ಹೂಳು ತೆಗೆಯುವ ಕಾರ್ಯ ಪ್ರಾರಂಭವಾಗಿದೆ. ಹೂಳೆತ್ತುವ
ಯಂತ್ರಗಳು ಕಾರ್ಯ ಪ್ರಾರಂಭಿಸಿವೆ.

2018ರಲ್ಲಿ ವಾಣಿಜ್ಯ ಬಂದರು ವ್ಯಾಪ್ತಿಯಲ್ಲಿ ಹೂಳು ತೆಗೆಯಲಾಗಿತ್ತು. 32 ಕೋಟಿ ರೂ. ವೆಚ್ಚದಲ್ಲಿ ಚೆನ್ನೈ‍ನ ಖಾಸಗಿ ಕಂಪನಿಯೊಂದು ಆರು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿ ಹೂಳು ತೆಗೆದಿತ್ತು. ಐದು ವರ್ಷಗಳ ನಂತರ ಈಗ ಹೂಳು ತೆಗೆಯುವ ಯೋಜನೆಗೆ ಚಾಲನೆ ಸಿಕ್ಕಿದೆ‌ . ಬ್ಯಾಕ್ ಹೋ (ಹೂಳು ತೆಗೆಯುವ ಯಂತ್ರ) ಒಳಗೊಂಡ ಹಡಗೊಂದು ಬಂದರು ಸಮೀಪದಲ್ಲಿ ಕಾರ್ಯಚರಣೆ ಪ್ರಾರಂಭಿಸಿದೆ.

ಕಾರವಾರ ವಾಣಿಜ್ಯ ಬಂದರಿನ ಧಕ್ಕೆ ( ವಾರ್ಫ್), ಹಡಗು ತಿರುಗುವ ಸ್ಥಳ, ಹಡಗು ಬಂದರು ಒಳಪ್ರವೇಶಿಸುವ ಮಾರ್ಗ, ಹೊರಗೆ ಹೋಗುವ ಮಾರ್ಗಗಳಲ್ಲಿ ಹೂಳು ತೆಗೆಯುವ ಕೆಲಸ ನಡೆಯಲಿದೆ. ಈ ಪ್ರದೇಶಗಳಲ್ಲಿ ಸದ್ಯ ಸರಾಸರಿ 6.5 ಮೀಟರ್ ನಿಂದ 7.5 ಮೀಟರ್ ವರೆಗೆ ಆಳವಿದೆ. ಅದನ್ನು ಮೊದಲಿದ್ದ 8.5 ಮೀಟರ್ ಆಳಕ್ಕೆ ಹೆಚ್ಚಿಸಲಾಗುತ್ತದೆ . ಕೆಲವು ಕಡೆ ಒಂದು ಮೀಟರ್ ,‌ಕೆಲವು ಕಡೆ 2 ಮೀಟರ್ ವರೆಗೆ ಹೂಳು ತುಂಬಿದ್ದು, ಅದನ್ನು ತೆರವು ಮಾಡಲಾಗುತ್ತಿದೆ. ತೆಗೆದ ಹೂಳನ್ನು ಆಳ ಸಮುದ್ರದಲ್ಲಿ ಹಾಕಲಾಗುತ್ತದೆ
ಎಂದು ಬಂದರು ಜಲಸಾರಿಗೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ವಿ. ಪ್ರಸಾದ್ ತಿಳಿಸಿದ್ದಾರೆ.

ಕಳೆದ ವರ್ಷವೇ ಬಂದರಿನಲ್ಲಿ ಹೂಳು ತುಂಬಿಕೊಂಡಿರುವ ಪ್ರಮಾಣದ ಕುರಿತು ಸಮೀಕ್ಷೆ ಕಾರ್ಯ ನಡೆದಿತ್ತು. ವಾಣಿಜ್ಯ ಬಂದರಿನಿಂದ ಹಡಗು ಹೊರಕ್ಕೆ ಹೋಗುವ ಸುಮಾರು 3.5 ಕಿ.ಮೀದಿಂದ 4 ಕಿ.ಮೀ ದೂರದವರೆಗೆ 17.5 ಲಕ್ಷ ಘನ ಮೀಟರ್ ಹೂಳು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ತೆಗೆದ ಹೂಳನ್ನು ಐದು ನಾಟಿಕಲ್ ಮೈಲು ದೂರದ ಆಳಪ್ರದೇಶಕ್ಕೆ ಕೊಂಡೊಯ್ದು ಹಾಕಲಾಗುತ್ತದೆ ಎಂದು ಪ್ರಸಾದ್ ವಿವರಿಸಿದರು.

ಬ್ಯಾಕ್ ಹೋ ಯಂತ್ರ ಹೊಂದಿರುವ ಹಡಗು ಧಕ್ಕೆ ( ವಾರ್ಫ್), ಹಡಗು ತಿರುಗುವ ಸ್ಥಳದಲ್ಲಿ ಹೂಳು ತೆಗೆಯುವ ಕೆಲಸ ನಡೆಸಲಿದೆ. ಹಡಗು ಸಂಚರಿಸುವ ಮಾರ್ಗದಲ್ಲಿ ಹೂಳು ತೆಗೆಯುವ ಅತ್ಯಾಧುನಿಕ ತಂತ್ರಜ್ಞಾನದ ಟಿ.ಎಸ್.ಎಚ್.ಡಿ ಸೌಲಭ್ಯದ ಹಡಗು ಹೂಳು ತೆಗೆಯಲಿದೆ. ಏಕಕಾಲಕ್ಕೆ ಅದು 7 ಸಾವಿರ ಘನ ಮೀಟರ್ ಹೂಳು ತೆರವುಗೊಳಿಸುವ ಸಾಮರ್ಥ್ಯವನ್ನು ಆ ಯಂತ್ರ ಹೊಂದಿದೆ ಎಂದರು.

ವಾಣಿಜ್ಯ ಬಂದರು ಹೂಳು ತೆಗೆಯಲು ಮುಂಬೈ ಮೂಲದ ಡಿ.ವಿ.ಪಿ ಇನ್‍ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದಿದೆ. 36 ಕೋಟಿ ರೂ‌ .ವೆಚ್ಚದ ಯೋಜನೆ ಇದು‌ . ಈಗ ಕೆಲಸ ಆರಂಭವಾಗಿದೆ ಎಂದರು.

ವಾಸ್ತವವಾಗಿ ಪ್ರತಿ ವರ್ಷ ಹೂಳು ತೆಗೆಯಬೇಕು:

ವಾಣಿಜ್ಯ ಬಂದರಿನಲ್ಲಿ ಪ್ರತಿ ವರ್ಷವೂ ಹೂಳು ತೆಗೆದರೆ ಹಡಗು ಸಂಚಾರಕ್ಕೆ ಸುಗಮ ಅವಕಾಶವಾಗುತ್ತದೆ. 5 ವರ್ಷದ ಬಳಿಕ ಹೂಳು ತೆಗೆಯಲು ಸರ್ಕಾರದ ಅನುಮತಿ ಪಡೆದು ಆರಂಭಿಸುತ್ತಿದ್ದೇವೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button