
ಬಂಟ್ವಾಳ: ಚಾಕು ತೋರಿಸಿ ಚಿನ್ನಾಭರಣ ದರೋಡೆ
ಮನೆಯಲ್ಲಿದ್ದ ತಾಯಿ ಮಗಳಿಗೆ ಚಾಕು ತೋರಿಸಿ ಬೆದರಿಸಿ ನಗದು ಸಹಿತ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಬಂಟ್ವಾಳದ ವಗ್ಗದಲ್ಲಿ ನಡೆದಿದೆ.
ಗುರುವಾರ ಬೆಳಗ್ಗಿನ ಜಾವ 6.30ರ ಸುಮಾರಿಗೆ ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿ ರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಗೆ ಆಗಮಿಸಿದ ನಾಲ್ವರು ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಮತ್ತು ಮಗಳಿಗೆ ಚಾಕು ತೋರಿಸಿ ಈ ದರೋಡೆ ನಡೆಸಿದ್ದಾರೆ.
ಘಟನೆ ಸಂದರ್ಭ ಮನೆಯಲ್ಲಿ ಪ್ಲೋರಿನಾ ಪಿಂಟೊ ಮತ್ತು ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದರೆಂದು ತಿಳಿದು ಬಂದಿದೆ.
ಗೊದ್ರೇಜ್ ನಲ್ಲಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ಚಿನ್ನದ ಆಭರಣಗಳು, 30 ಸಾವಿರ ರುಪಾಯಿ ನಗದು ಹಾಗೂ ಒಂದು ಮೊಬೈಲ್ ಪೋನ್ ಸಹಿತ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗ-ನಗದು ದರೋಡೆಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.




